ಮಂಗಳೂರು : ಗುಜರಿ ಅಂಗಡಿ ಬೆಂಕಿಗಾಹುತಿ
ಮಂಗಳೂರು, ಜು. 2 : ಕರಂಗಲ್ಪಾಡಿಯಲ್ಲಿರುವ ಗುಜರಿ ಅಂಗಡಿಯೊಂದರಲ್ಲಿ ಸೋಮವಾರ ತಡರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಇದರಿಂದಾಗಿ ಅಂಗಡಿ ಅಕ್ಕ-ಪಕ್ಕದ ಮನೆಗಳಿಗೆ ಹಾನಿ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸಲೀಂ ಉಳ್ಳಾಲ ಎಂಬವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಹತ್ತಿರದ ಸನ್ ಫ್ಲವರ್ ಅಪಾರ್ಟ್‌ಮೆಂಟ್ ನಿವಾಸಿಗಳು ಮೊದಲು ಗಮನಿಸಿದರು. ತಕ್ಷಣ ಅವರು ಸ್ಥಳೀಯರು ಹಾಗೂ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದರು.

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸುವ ಮೊದಲೇ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಇದರಿಂದಾಗಿ ಬೆಂಕಿಯ ಕೆನ್ನಾಲಿಗೆ ಇತರ ಪ್ರದೇಶಗಳಿಗೆ ಹಬ್ಬವುದನ್ನು ತಡೆಯಲು ಸಾಧ್ಯವಾಯಿತು.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ಸಂಪಪೂರ್ಣವಾಗಿ ಹತೋಟಿಗೆ ತಂದರು. ಅಗ್ನಿ ಆಕಸ್ಮಿಕಕ್ಕೆ ನಿಖರವಾರ ಕಾರಣ ತಿಳಿದುಬಂದಿಲ್ಲ. ಈ ಅಗ್ನಿ ಆಕಸ್ಮಿಕದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಗ್ನಿ ಆಕಸ್ಮಿಕದಿಂದ ಆದ ಹಾನಿಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಳವೆ ಬಾವಿ ಮುಚ್ಚಲು ಸೂಚನೆ : ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚಬೇಕು ಮತ್ತು ಕಲ್ಲು ಗಣಿಗೆ ತಡೆಬೇಲಿ ನಿರ್ಮಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಮುದ್ದುಮೋಹನ್ ಸೂಚನೆ ನೀಡಿದ್ದಾರೆ. ಕಲ್ಲುಗಣಿ ಪ್ರದೇಶಗಳಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತದೆ. ಈ ನೀರಿನ ಗುಂಡಿಗಳಲ್ಲಿ ಜನ ಮತ್ತು ಜಾನುವಾರುಗಳು ಜಾರಿಬಿದ್ದು ಅವಘಡಗಳು ಸಂಭವಿಸುತ್ತವೆ. ಆದ್ದರಿಂದ ಅವುಗಳನ್ನು ಮುಚ್ಚಬೇಕು ಎಂದು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications