ನಮಗಾದ ಸ್ಥಿತಿ ಹರ್ಷ ಕುಟುಂಬಕ್ಕೆ ಆಗುವುದು ಬೇಡ; ಶರತ್ ಮಡಿವಾಳ ತಂದೆ
ಮಂಗಳೂರು, ಫೆಬ್ರವರಿ 22; ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹತ್ಯೆಗೆ ಕಾರಣರಾದವರಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಕಾರ್ಯಕರ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಘಟನೆಯ ಸಂಬಂಧ ಈಗಾಗಲೇ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಹರ್ಷ ಕೊಲೆಯ ಮಾದರಿಯಲ್ಲೇ ಬಂಟ್ವಾಳದ ಆರ್‌ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯೂ 2017ರಲ್ಲಿ ನಡೆದಿದ್ದು, ಹರ್ಷನ ಕೊಲೆಗೆ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಸಂತಾಪ ಸೂಚಿಸಿದ್ದಾರೆ.
2017ರ ಜುಲೈ 7ರ ರಾತ್ರಿ ಬಂಟ್ವಾಳದ ಬಿಸಿ ರೋಡ್ ನಲ್ಲಿರುವ ತನ್ನ ಉದಯ ಲಾಂಡ್ರಿ ಅಂಗಡಿಯಲ್ಲಿದ್ದ ಶರತ್ ಮಡಿವಾಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು. ಈ ಕೊಲೆ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಠಿಸಿತ್ತು. ಶರತ್ ಮಡಿವಾಳನ ಮಾದರಿಯಲ್ಲೇ ಶಿವಮೊಗ್ಗದ ಹರ್ಷನ ಹತ್ಯೆಯಾಗಿದೆ.
"ತನಗಾದ ವೇದನೆ ಹರ್ಷ ಕುಟುಂಬಕ್ಕೂ ಆಗಿದ್ದು, ಸರ್ಕಾರ, ಜನರು ಹರ್ಷ ಕುಟುಂಬದ ಜೊತೆಗಿರಬೇಕೆಂದು" ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.

ಶರತ್ ಮಗನಾಗಿ ಮಾತ್ರ ಇರಲಿಲ್ಲ
"ಶರತ್ ಮನೆಗೆ ಕೇವಲ ಮಗನಾಗಿ ಮಾತ್ರ ಇರಲಿಲ್ಲ. ನನ್ನೆಲ್ಲಾ ಜವಾಬ್ದಾರಿಗಳನ್ನು ಶರತ್ ತೆಗೆದುಕೊಂಡಿದ್ದ. ಯಾರ ಜೊತೆಯೂ ಜಗಳಕ್ಕೆ ಹೋದವನಲ್ಲ. ತಾನಾಯಿತು ತನ್ನ ಸಂಘದ ಕೆಲಸವಾಯಿತು ಅಂತಾ ಇದ್ದ. ಆ ದಿನ ಬಂಟ್ವಾಳದಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತು. ರಾತ್ರಿ ಲಾಂಡ್ರಿ ಅಂಗಡಿ ಬಂದ್ ಮಾಡುವ ಸಮಯವಾಗಿತ್ತು. ಬಂದ್ ಮಾಡಿ ಹೋಗೋಣ ಮಗಾ ಅಂದಿದ್ದೆ" ಎಂದು ತನಿಯಪ್ಪ ಮಡಿವಾಳ ನೆನಪಿಸಿಕೊಂಡರು.

ದುಷ್ಕರ್ಮಿಗಳು ದಾಳಿ ಮಾಡಿದರು
ತನಿಯಪ್ಪ ಮಡಿವಾಳ ಮಾತನಾಡಿ, "ನೀವು ಮುಂದೆ ಹೋಗಿ, ಉಳಿದ ಕೆಲಸ ಮುಗಿಸಿ ಹತ್ತು ನಿಮಿಷದಲ್ಲಿ ಹೊರಡುತ್ತೇನೆ ಅಂತಾ ಹೇಳಿದ್ದ. ಆದರೆ ಇದೇ ಸಮಯವನ್ನು ಹೊಂಚು ಹಾಕಿದ್ದ ದುಷ್ಕರ್ಮಿಗಳು ಮಗನ ಮೇಲೆ ದಾಳಿ ಮಾಡಿದ್ದಾರೆ. ಮಗನನ್ನು ಕಳೆದುಕೊಂಡು ನಮಗೆ ಭವಿಷ್ಯವೇ ಇಲ್ಲವಾಗಿದೆ" ಎಂದು ಗದ್ಗದಿತರಾದರು.
"ನನಗಾದ ಸ್ಥಿತಿ ಹರ್ಷ ಅವರ ತಂದೆಗೆ ಬರೋದು ಬೇಡ. ನನಗೂ ಎರಡು ಹೆಣ್ಣು ಮಕ್ಕಳು. ಹರ್ಷ ಅವರ ತಂದೆಗೂ ಎರಡು ಹೆಣ್ಣು ಮಕ್ಕಳು. ನನಗಾದ ಸ್ಥಿತಿ ಅವರಿಗೆ ಆಗೋದು ಬೇಡ. ಸರ್ಕಾರ ಮತ್ತು ರಾಜ್ಯದ ಜನರು ಹರ್ಷ ಅವರ ಕುಟುಂಬಿಕರ ಜೊತೆ ನಿಲ್ಲಬೇಕು" ಎಂದು ತನಿಯಪ್ಪ ಹೇಳಿದ್ದಾರೆ.

ಸಂಘಟನೆಗಳು ನಿಷೇಧವಾಗಬೇಕು
"ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಡಳಿತ ಇದೆ. ಕೊಲೆಗಳ ಹಿಂದೆ ಇರುವ ಎಸ್‌ಡಿಪಿಐ ಮತ್ತು ಪಿಎಫ್‌ಐ ಅನ್ನು ಸರ್ಕಾರ ನಿಷೇಧ ಮಾಡಬೇಕು. ಈ ಸಂಘಟನೆಗಳು ನಿಷೇಧ ಆಗದಿದ್ದರೆ ಹಿಂದೂಗಳು ಜೀವಂತ ಆಗಿ ಇರೋಕೆ ಸಾಧ್ಯ ಇಲ್ಲ. ನನ್ನ ಮಗ ಕೊಲೆಯಾದ ಸಂಧರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಆಗ ಸರ್ಕಾರದಿಂದ ನಮಗೆ ಏನೂ ಸಿಕ್ಕಿಲ್ಲ. ಸಂಘಟನೆಗಳು, ಬಿಜೆಪಿ ಅಳಿಲು ಸೇವೆ ಮಾಡಿದೆ. ಆದರೆ ಹರ್ಷ ಅವರ ಕುಟುಂಬಕ್ಕೆ ನಮಗಾದ ಸ್ಥಿತಿ ಬರಬಾರದು" ಎಂದು ತನಿಯಪ್ಪ ಹೇಳಿದ್ದಾರೆ.

ಜೈಲಿನಲ್ಲಿದ್ದು ಹೊರಗೆ ಬಂದಿದ್ದಾರೆ
"ಶರತ್ ಹತ್ಯೆಯಾದ ಸಂಧರ್ಭದಲ್ಲಿ ಆಗಿನ ಬಂಟ್ವಾಳ ಶಾಸಕರು ಮತ್ತು ಸಚಿವರೂ ಆಗಿದ್ದ ರಮಾನಾಥ್ ರೈ ನನ್ನ ಬಳಿ ಸರ್ಕಾರದಿಂದ ಏನಾದರೂ ಕೊಟ್ಟರೆ ನಿಮಗೆ ಕೊಡುತ್ತೇನೆ ಅಂತಾ ಹೇಳಿದ್ದರು. ಅವರ ಭಿಕ್ಷೆಯ ಭರವಸೆಯಲ್ಲಿ ನಾನಿಲ್ಲ. ಶರತ್ ಕೊಲೆ ಮಾಡಿದವರು ಸ್ವಲ್ಪ ದಿನ ಜೈಲಿನಲ್ಲಿದ್ದು ನಂತರ ಹೊರಗೆ ಬಂದಿದ್ದಾರೆ. ಪೊಲೀಸ್ ತನಿಖೆಯೂ ಈ ಕೊಲೆ ಪ್ರಕರಣದಲ್ಲಿ ಸಮರ್ಪಕವಾಗಿ ನಡೆಯಲಿಲ್ಲ. ತನಿಖಾಧಿಕಾರಿಗಳು ಸಾಕ್ಷ್ಯ ವಿಚಾರಣೆಯನ್ನೂ ಮಾಡಿಲ್ಲ. ನನ್ನ ಬಳಿಯೂ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಶರತ್ ಕೊಲೆಮಾಡಿದ ಆರೋಪಿ ಈಗ ಸುಖ ಸಂಸಾರ ಮಾಡುತ್ತಿದ್ದಾನೆ. ನಾವು ಹಿರಿ ಜೀವಗಳು ಮಗನ ನೆನಪಲ್ಲೇ ದಿನಕಳೆಯುತ್ತಿದ್ದೇವೆ" ಎಂದು ತನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications