ಚಾರ್ಮಾಡಿ ಘಾಟ್ ರಸ್ತೆ ತುರ್ತು ದುರಸ್ತಿಗೆ 1.84 ಕೋಟಿ ರೂ. ಬಿಡುಗಡೆ
ಮಂಗಳೂರು, ಸೆಪ್ಟೆಂಬರ್. 27 : ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎದುರಿಸಿದ ಅತಿವೃಷ್ಠಿಯಿಂದಾಗಿ ಜಿಲ್ಲೆಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳೂರು ದಸರಾ ಆರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿತಿಗೆ ಅಧಿಕಾರಿಗಳು ತುರ್ತು ಕ್ರಮ ಕೈ ಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ರಸ್ತೆ ದುರಸ್ಥಿತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯವರು ತಮ್ಮ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಗೊಳಿಸಿ ವಾಹನ ಸವಾರರಿಗೆ, ಪ್ರವಾಸಿಗಳಿಗೆ ಸಂಚಾರದಲ್ಲಿ ತೊಂದರೆಯಾಗದಂತೆ ಕ್ರಮವಹಿಸಬೇಕು.

ಜಿಲ್ಲೆಯ ಜನರಿಂದ ಹದಗೆಟ್ಟಿರುವ ರಸ್ತೆ ಸಂಪರ್ಕ ಕುರಿತು ಹಲವು ದೂರುಗಳು ಬರುತ್ತಿದೆ. ಅಧಿಕಾರಿಗಳು ರಸ್ತೆ ದುರಸ್ತಿಯನ್ನು ಶೀಘ್ರವೇ ಅಭಿವೃದ್ಧಿಪಡಿಸಬೇಕು.
ಅತಿವೃಷ್ಠಿಯಡಿ ಪ್ರಸಕ್ತ ಸಾಲಿನಲ್ಲಿ ಇಲಾಖೆಗಳಿಗೆ ನೇರವಾಗಿ ಅನುದಾನ ಬಂದಿದ್ದು, ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಅನುದಾನ ಮತ್ತು ಕಾರ್ಯಾನುಷ್ಠಾನ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸಸಿರಾಜ್ ಸೆಂಥಿಲ್ ಸೂಚಿಸಿದರು.
ಬಿ.ಸಿ. ರೋಡಿನಿಂದ ಅಡ್ಡಹೊಳೆಯವರೆಗೆ ರಸ್ತೆ ಕಾಮಗಾರಿ ಅಭಿವೃದ್ಧಿಯಲ್ಲಿದ್ದು, ಈ ಪ್ರದೇಶದಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ ಸಚಿವ ಖಾದರ್ ಭಾರೀ ವಾಹನಗಳು ಆರಂಭವಾದರೆ ರಸ್ತೆ ಅಗೆತ ಮತ್ತು ಕಾಮಗಾರಿಯಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.

ಅಡ್ಡಹೊಳೆ -ಬಿಸಿ ರೋಡ್ ರಸ್ತೆಯ ಸಮಸ್ಯೆಗಳನ್ನು ಆಲಿಸಲು ದಿನ ನಿಗದಿ ಮಾಡಿ, ಉಪ್ಪಿನಂಗಡಿಯಿಂದ ಜನರ ಸಮಸ್ಯೆ ಆಲಿಸಲಿದ್ದೇನೆ ಎಂದು ಸಚಿವರು ಹೇಳಿದರು. ಈ ರಸ್ತೆ ವ್ಯಾಪ್ತಿಯಲ್ಲಿ ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿಗಳ ಬಳಿ ಫ್ಲೈ ಓವರ್ ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ಹೆದ್ದಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಬರುವ ಕುಲಶೇಕರ- ಕಾರ್ಕಳ, ಸಂಪಾಜೆ-ಬಿ.ಸಿರೋಡುಗಳ ದುರಸ್ತಿಗೆ ತಕ್ಷಣವೇ ಕ್ರಮಕೈಗೊಳ್ಳಲಾಗಿದೆ. ಸುಳ್ಯ ಸಂಪಾಜೆ ನಡುವೆ ವಾಹನ ಓಡಾಟಕ್ಕೆ ಅನುಕೂಲವಾಗುವಂತೆ ಯುದ್ದೋಪಾದಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಜನರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ರಸ್ತೆಯನ್ನು ತೆರೆಯಲಾಗುವುದು ಎಂದು ಖಾದರ್ ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಗೆ ಮಾಹಿತಿ ನೀಡಿದ ಮುಖ್ಯ ಇಂಜಿನಿಯರ್, ಚಾರ್ಮಾಡಿ ಘಾಟಿ ರಸ್ತೆಯ ತುರ್ತು ದುರಸ್ತಿಗೆ 1.84 ಕೋಟಿ ರೂಪಾಯಿಗಳು ಬಿಡುಗಡೆಯಾಗಿದ್ದು, ದುರಸ್ತಿ ನಡೆಸಲಾಗುವುದು. ಶಾಶ್ವತ ದುರಸ್ತಿ ಕಾಮಗಾರಿಗೆ 126 ಕೋಟಿಗಳ ಯೋಜನೆಯನ್ನು ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಬಳಿಕ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗುವುದು.
ಗುರುಪುರ ಸೇತುವೆಗೆ ಸಂಬಂಧಿಸಿದಂತೆ 37.84 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಈ ಯೋಜನೆ ಎರಡು ವರ್ಷದೊಳಗೆ ಸಂಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಮರಳು ಸಮಸ್ಯೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಡಿ ನಿರ್ವಹಿಸಲ್ಟಡುವ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಆದ್ಯತೆಯಡಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಮರಳುಕೊರತೆ ಕಾಡದಂತೆ ಕ್ರಮವಹಿಸಿ ಎಂದು ಸಚಿವರು ಸಭೆಯಲ್ಲಿ ಸೂಚಿಸಿದರು.












Click it and Unblock the Notifications