ಬಂಡೆ ತೆರವು ಕಾರ್ಯಾಚರಣೆ; ಇಂದು ಕೂಡ ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತ
ಮಂಗಳೂರು, ಜುಲೈ 23: ಕರಾವಳಿಯಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.
ಸಿರಿವಾಗಿಲು ಬಳಿ ಭೂಕುಸಿತ; 2 ದಿನ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತ
ಈ ನಡುವೆ ಸುಬ್ರಹ್ಮಣ್ಯ ರಸ್ತೆ ಮತ್ತು ಸಿರಿವಾಗಿಲು ರೈಲ್ವೆ ಮಾರ್ಗದ ನಡುವೆ ಘಾಟಿ ಪ್ರದೇಶದ ಇಕ್ಕೆಲಗಳಲ್ಲಿ ಪದೇ ಪದೇ ರೈಲು ಓಡಾಟಕ್ಕೆ ತೊಂದರೆ ನೀಡುತ್ತಿರುವ ಹೆಬ್ಬಂಡೆಗಳ ತೆರವು ಕಾರ್ಯಾಚರಣೆಯು ಇಂದು ಕೂಡ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಇಂದೂ ಮಂಗಳೂರು- ಬೆಂಗಳೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆ, ಬಂಡೆಗಳನ್ನು ಒಡೆದು ತೆರವುಗೊಳಿಸುವ ಕಾಮಗಾರಿಗೆ ಅಡ್ಡಿಯಾಗಿದ್ದು, ಕಾಮಗಾರಿ ಒಂದು ಹಂತಕ್ಕೆ ತಲುಪಲು ಇನ್ನೂ ಎರಡು ದಿನಗಳು ಬೇಕಾಗಬಹುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.