ಉಪ್ಪಿ ಕುಟುಂಬದಲ್ಲಿ ನಿಶ್ಚಿತಾರ್ಥದ ಸಂಭ್ರಮ: ನಟ ನಿರಂಜನ್ ಕೈಹಿಡಿಯುತ್ತಿರುವ ಈ ಸುಂದರಿ ಯಾರು?
ಸ್ಯಾಂಡಲ್‌ವುಡ್‌ನ 'ರಿಯಲ್ ಸ್ಟಾರ್' ಉಪೇಂದ್ರ ಅವರ ಕುಟುಂಬದಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಕುಮಾರ್ ಅವರ ಹಿರಿಯ ಪುತ್ರ, ಯುವ ನಟ ನಿರಂಜನ್ ಸುಧೀಂದ್ರ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಮೊದಲ ಹೆಜ್ಜೆ ಇಟ್ಟಿದ್ದು, ಸಂಜನಾ ರಾಜ್ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಉಪೇಂದ್ರ ಕುಟುಂಬದ ಸದಸ್ಯರು ಪಾಲ್ಗೊಂಡು ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.
ಉಪ್ಪಿ ಕುಟುಂಬದಲ್ಲಿ ಸಡಗರ-ಸಂಭ್ರಮ
ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಕುಮಾರ್ ಹಾಗೂ ವೀಣಾ ದಂಪತಿಯ ಹಿರಿಯ ಮಗನೇ ನಿರಂಜನ್ ಸುಧೀಂದ್ರ. ತಂದೆ ಚಿತ್ರರಂಗದಲ್ಲಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ, ನಿರಂಜನ್ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಈಗ ಮಗನ ನಿಶ್ಚಿತಾರ್ಥದ ಮೂಲಕ ಸುಧೀಂದ್ರ ಅವರ ಮನೆಯಲ್ಲಿ ಮದುವೆ ಕಳೆಗಟ್ಟಿದೆ. ಈ ಸಂಭ್ರಮದ ಕ್ಷಣಕ್ಕೆ ಇಡೀ ಉಪೇಂದ್ರ ಕುಟುಂಬ ಸಾಕ್ಷಿಯಾಗಿದೆ. ನಿಶ್ಚಿತಾರ್ಥದ ಸುಂದರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಜೋಡಿಗೆ ಹರಸಿದ ಉಪೇಂದ್ರ-ಪ್ರಿಯಾಂಕಾ ದಂಪತಿ
ನಿರಂಜನ್ ಸುಧೀಂದ್ರ ಮತ್ತು ಸಂಜನಾ ರಾಜ್ ಅವರ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಚಿಕ್ಕಪ್ಪ ಉಪೇಂದ್ರ, ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಮಕ್ಕಳಾದ ಐಶ್ವರ್ಯಾ ಮತ್ತು ಆಯುಷ್ ಪ್ರಮುಖ ಆಕರ್ಷಣೆಯಾಗಿದ್ದರು. ಅತ್ಯಂತ ಸಡಗರದಿಂದ ಕಾರ್ಯಕ್ರಮದಲ್ಲಿ ಭಾಗಿಯಾದ ಇಡೀ ಫ್ಯಾಮಿಲಿ, ಹೊಸ ಜೋಡಿಗೆ ಪ್ರೀತಿಯಿಂದ ಹರಸಿ ವಿಶ್ ಮಾಡಿದೆ. ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಉಪೇಂದ್ರ ಕುಟುಂಬದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ನಿರಂಜನ್
ಉಪೇಂದ್ರ ಅವರ ನೆರಳಿನಲ್ಲೇ ಬೆಳೆದರೂ ಚಿತ್ರರಂಗದಲ್ಲಿ ತನ್ನದೇ ಆದ ಪರಿಶ್ರಮದಿಂದ ಗುರುತಿಸಿಕೊಳ್ಳಲು ನಿರಂಜನ್ ಪ್ರಯತ್ನಿಸುತ್ತಿದ್ದಾರೆ. 'ಬಳ್ಳಾರಿ ನಾಗ' ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಇವರು, ನಂತರ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿದ್ದ 'ಸೆಕೆಂಡ್ ಹಾಫ್' ಸಿನಿಮಾ ಮೂಲಕ ನಾಯಕ ನಟನಾಗಿ ಪ್ರಮೋಷನ್ ಪಡೆದರು. ಆ ಬಳಿಕ 'ನಮ್ಮ ಹುಡುಗರು' ಮತ್ತು 'ಸೀತಾ ಪಯಣಂ' ಸೇರಿದಂತೆ ಕೆಲವು ಪ್ರಮುಖ ಸಿನಿಮಾಗಳಲ್ಲಿ ಮಿಂಚಿರುವ ನಿರಂಜನ್, ಸ್ಯಾಂಡಲ್‌ವುಡ್‌ನ ಭರವಸೆಯ ಯುವ ನಟರಲ್ಲಿ ಒಬ್ಬರಾಗಿದ್ದಾರೆ. ಇದೀಗ ವೈಯಕ್ತಿಕ ಜೀವನದಲ್ಲೂ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ನಿರಂಜನ್ ಸುಧೀಂದ್ರ ಮತ್ತು ಸಂಜನಾ ರಾಜ್ ಅವರ ಎಂಗೇಜ್‌ಮೆಂಟ್ ಸಂಭ್ರಮದ ಸುಂದರ ಫೋಟೋಗಳನ್ನು ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಂಪತಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಉಪ್ಪಿ ಕುಟುಂಬದ ಈ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಚಿಕ್ಕಪ್ಪ ಉಪೇಂದ್ರ, ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಮಕ್ಕಳಾದ ಐಶ್ವರ್ಯಾ ಮತ್ತು ಆಯುಷ್ ಒಟ್ಟಿಗಿರುವ ಇಡೀ ಉಪ್ಪಿ ಫ್ಯಾಮಿಲಿಯ 'ಪರ್ಫೆಕ್ಟ್ ಗ್ರೂಪ್ ಫೋಟೋ' ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಲೈಕ್ಸ್ ಮತ್ತು ಕಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.













Click it and Unblock the Notifications