ಸುಳ್ಯ: ರಸ್ತೆ ದುರಸ್ಥಿ ಮಾಡಿದ ಎಳೆಯ ಮಕ್ಕಳು; ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು
ಮಂಗಳೂರು, ಅಕ್ಟೋಬರ್ 26: ಮೀನುಗಾರಿಕೆ ಸಚಿವ ಎಸ್. ಅಂಗಾರ ಪ್ರತಿನಿಧಿಸುವ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭೆ ಕ್ಷೇತ್ರ ಮತ್ತೆ ಮೂಲಭೂತ ಸೌಕರ್ಯ ಇಲ್ಲದೆ ಕುಖ್ಯಾತಿಗೀಡಾಗಿದೆ.
ರಸ್ತೆ ಸಮಸ್ಯೆ, ಸೇತುವೆ ಸಮಸ್ಯೆಯಿಂದ ರಾಷ್ಟ್ರ ಮಟ್ಟದಲ್ಲಿ ಅಪಖ್ಯಾತಿಗೆ ಗುರಿಯಾಗಿದ್ದ ಸುಳ್ಯ ಈಗ ಮತ್ತೆ ಮೂಲಸೌಕರ್ಯ ಒದಗಿಸದೇ ಮುನ್ನಲೆಗೆ ಬಂದಿದ್ದು, ಸಚಿವರ ಸ್ವಕ್ಷೇತ್ರದ ಪರಿಸ್ಥಿತಿಯ ಬಗ್ಗೆ ಸ್ವತಃ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ಅಸಮಾಧಾನಗೊಂಡಿದ್ದಾರೆ.
ಅಕ್ಟೋಬರ್ 25ರಿಂದ ರಾಜ್ಯದಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭಗೊಂಡಿದೆ. ಆದರೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಬೆಳ್ಳಾರೆಯ, ಮುಡಾಯಿತೋಟ- ಬೆಳ್ಳಾರೆ ಸಂಪರ್ಕಿಸುವ ಮಂಡೇಪು ಎಂಬಲ್ಲಿ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಮಕ್ಕಳಿಗೆ ಆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಅಸಾಧ್ಯವಾಗಿತ್ತು.

ಹೀಗಾಗಿ ಸ್ಥಳೀಯ ನಿವಾಸಿಗಳಾದ ಸಂತೋಷ್ ಮತ್ತು ಕೇಶವ ಎಂಬುವವರು ಕೆಸರುಮಯ ರಸ್ತೆಯನ್ನು ದುರಸ್ಥಿ ಮಾಡುವುದಕ್ಕೆ ಇಳಿದಿದ್ದಾರೆ. ಈ ವೇಳೆ ಇವರ ಮಕ್ಕಳಾದ ಎರಡನೇ ತರಗತಿಯ ವಲ್ಲೀಶ ರಾಮ ಮತ್ತು ತಾನ್ವಿ ಹಾರೆ ಹಿಡಿದು ಹೆತ್ತವರ ಜೊತೆ ತಾವೂ ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ.
ಕೈಯಲ್ಲಿ ಹಾರೆ ಹಿಡಿದುಕೊಂಡು ರಸ್ತೆಯಲ್ಲಿ ತುಂಬಿರುವ ಕೆಸರನ್ನು ಬದಿಗೆ ಸರಿಸಿ ನೀರು ಹೊರಗೆ ಬಿಡುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಈ ಫೋಟೋವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಜನರಿಂದ ಆಡಳಿತ ವ್ಯವಸ್ಥೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಕ್ಕಳು ರಸ್ತೆ ದುರಸ್ಥಿ ಮಾಡಿದ ಸ್ಥಳಕ್ಕೆ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರಾದ ಸೋಮಶೇಖರ್ ಭೇಟಿ ನೀಡಿದ್ದಾರೆ.
ಈ ವೇಳೆ ಮಕ್ಕಳ ಕೈಗೆ ಹಾರೆ ನೀಡಿದಕ್ಕಾಗಿ, ನ್ಯಾಯಾಧೀಶರು ಮಕ್ಕಳ ಹೆತ್ತವರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಕ್ಕಳ ಹೆತ್ತವರು, ತುಂಬಾ ಸಮಯದಿಂದ ರಸ್ತೆ ಹಾಳಾಗಿತ್ತು. ಮಳೆ ಬಂದರೆ ನಡೆದುಕೊಂಡು ಹೋಗುವುದೇ ಅಸಾಧ್ಯವಾಗಿತ್ತು. ಈ ಬಗ್ಗೆ ಪಂಚಾಯತ್‌ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೆವು. ಆದರೆ ಪಂಚಾಯತ್‌ನವರು ರಸ್ತೆ ದುರಸ್ಥಿ ಮಾಡಿರಲಿಲ್ಲ. ಮಕ್ಕಳಿಗೆ ಶಾಲೆಗೆ ಹೋಗಲು ದಿನ ನಿಗದಿಯಾಗಿದ್ದರಿಂದ ನಾವೇ ಹೆತ್ತವರು ಸೇರಿ ಶ್ರಮದಾನ ಮಾಡಿದ್ದೇವೆ. ಈ ವೇಳೆ ಮಕ್ಕಳೂ ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ ಎಂದು ಹೆತ್ತವರು ಸ್ಪಷ್ಟನೆ ನೀಡಿದ್ದಾರೆ.
ಈ ವೇಳೆ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶ ಸೋಮಶೇಖರ್, ರಸ್ತೆ ದುರಸ್ಥಿ ಮಾಡಿಸದ ಪಂಚಾಯತ್ ಅಧ್ಯಕ್ಷ, ಸದಸ್ಯ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಈ ವೇಳೆ ರಸ್ತೆ ದುರಸ್ಥಿ ಮಾಡುವುದಾಗಿ ಗ್ರಾಮ ಪಂಚಾಯತ್‌ನವರು ಹೇಳಿದ್ದು, ಕೂಡಲೇ ದುರಸ್ಥಿ ಮಾಡಿ, ರಸ್ತೆಯ ಚಿತ್ರ ಮತ್ತು ವರದಿ ಸಲ್ಲಿಸಬೇಕೆಂದು ನ್ಯಾಯಾಧೀಶರು ತಾಕೀತು ಮಾಡಿದ್ದಾರೆ.
ಸುಳ್ಯ ತಾಲ್ಲೂಕಿನಲ್ಲಿ ಈ ರೀತಿಯ ಹಲವು ರಸ್ತೆಗಳು ದುರಸ್ಥಿ ಕಾಣದೇ, ಜನರು ನರಕಯಾತನೆ ಪಡುವಂತಾಗಿದೆ. ಕೆಲವು ರಸ್ತೆಗಳ ಅಭಿವೃದ್ಧಿಗೆ ಪ್ರಧಾನಮಂತ್ರಿಯವರಿಗೆ ಮನವಿ ಪತ್ರ ಬರೆದಿರುವ ಉದಾಹರಣೆಗಳೂ ಇದೆ. ಇದೀಗ ಬೆಳ್ಳಾರೆಯ ರಸ್ತೆ ಅವ್ಯವಸ್ಥೆಗೆ ನ್ಯಾಯಾಧೀಶರೇ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನಾದರೂ ರಸ್ತೆ ದುರಸ್ಥಿಯಾಗಿ ಗ್ರಾಮದ ಜನರ ಬಹುಕಾಲದ ಬೇಡಿಕೆ ಈಡೇರುತ್ತಾ ಎಂಬುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications