ದಟ್ಟ ಅರಣ್ಯದಲ್ಲಿ ಹರಳು ಕಲ್ಲು ದಂಧೆ; 'ಪುಷ್ಪ' ಸಿನಿಮಾ ನಾಚಿಸುವ ಮಾಫಿಯಾ!
ಮಂಗಳೂರು, ಫೆಬ್ರವರಿ 06; ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಲನಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿ ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಈ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿದೆ. 'ಪುಷ್ಪ' ಚಲನಚಿತ್ರದ ಮಾದರಿಯಲ್ಲೇ ನಮ್ಮ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ದಂಧೆ ಕಾರ್ಯನಿರ್ವಹಿಸುತ್ತಿದೆ.
ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಕೆಂಪು ಹರಳು ಕಲ್ಲು ದಂಧೆ ಮತ್ತೆ ಕಾರ್ಯಾರಂಭಗೊಂಡಿದೆ. ದಟ್ಟಕಾನನದ ನಡುವೆ ನಿಗೂಢ ದಂಧೆ ಈಗ ಆರಂಭವಾಗಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯ ದಲ್ಲಿ ಈ ನಿಗೂಢ ಹರಳುಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ.
ಆಭರಣ, ಉಂಗುರುಗಳಿಗೆ ಬಳಸುವ ಈ ಕೆಂಪು ಹೊಳೆಯುವ ಕಲ್ಲಿಗಾಗಿ ಅಕ್ರಮ ದಂಧೆಕೋರರು ಹುಡುಕಾಟ ನಡೆಸುತ್ತಿದ್ದು ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ದಶಕಗಳ ಹಿಂದೆ ನಿಂತೂ ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭಗೊಂಡಿದ್ದು ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪುಷ್ಪಗಿರಿ ಅರಣ್ಯ ವಲಯದ ಎತ್ತರದ ಗಿರಿ ಶಿಖರದ ತುತ್ತ ತುದಿಯಲ್ಲಿ ಅಕ್ರಮ ದಂಧೆಯೊಂದು ನಿಗೂಢವಾಗಿ ನಡೆಯುತ್ತಿದೆ. ದಶಕಗಳ ಹಿಂದೆ ನಿಂತು ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭ ಗೊಂಡಿದ್ದು ಕಗ್ಗತ್ತಲ ರಾತ್ರಿಯಲ್ಲಿ ಬೆಟ್ಟದ ತುದಿಯಲ್ಲಿ ಹೊಳೆಯುವ ಹರಳು ಕಲ್ಲುಗಳಿಗಾಗಿ ಹುಡುಕಾಟ ಆರಂಭವಾಗಿದೆ.
ಪುಷ್ಪಗಿರಿ ಅರಣ್ಯವಲಯದ ಕೂಜಿಮಲೆ ಮತ್ತು ಸುಟ್ಟತ್ ಮಲೆಯಲ್ಲಿ ಈಗ ಅಕ್ರಮ ದಂಧೆ ಮತ್ತೇ ಗರಿಗೆದರಿದೆ. ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಕೆಂಪು ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಆಗ ಕೆಜಿಯೊಂದಕ್ಕೆ 500 ರೂಪಾಯಿ ಇಂದ ಆರಂಭವಾಗಿ ಸಾವಿರಾರು ರೂಪಾಯಿ ಬೆಲೆ ದೊರೆಯುತ್ತಿತ್ತು.
ಆದರೀಗ ಈ ಹರಳು ಕಲ್ಲಿಗೆ ರಾಜಸ್ಥಾನ ,ಗುಜರಾತ್ , ಮುಂಬೈ ಆಭರಣ ತಯಾರಿಕರಿಂದ ಭಾರೀ ಬೇಡಿಕೆ ಇದೆ. ಒಂದು ಮಾಹಿತಿಯ ಪ್ರಕಾರ ಈ ಹರಳು ಕಲ್ಲಿಗೆ ಪ್ರಸ್ತುತ 1 ಕೆಜಿಗೆ 30 ರಿಂದ 40 ಸಾವಿರ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ತುದಿಯಲ್ಲಿ ರಾತೋರಾತ್ರಿ ಹೊಳೆಯುವ ಹರಳುಕಲ್ಲಿಗಾಗಿ ಸುರಂಗ ತೋಡುವ ಕಾರ್ಯ ಆರಂಭವಾಗಿದೆ.

ಹೊಳೆಯುವ ಈ ಹರಳು ಕಲ್ಲು ತೆಗೆಯಲು ಕೊಡಗು ಭಾಗದಿಂದ ತಂಡಗಳು ಬರುತ್ತಿವೆ ಎಂದು ಹೇಳಲಾಗಿದೆ. ಹಣದ ಆಸೆಗೆ ಕಾರ್ಮಿಕರು ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಸುರಂಗ ಕೊರೆದು ಹರಳುಕಲ್ಲು ತೆಗೆಯುವ ವೇಳೆ ಸುರಂಗ ಕುಸಿದು ಅಲ್ಲಿಯೇ ಸಮಾಧಿಯಾದ ಘಟನೆಗಳು ಕೂಡ ನಡೆದಿವೆ. ಆದರೆ ದಶಕಗಳ ಬಳಿಕ ಮತ್ತೇ ಈ ಭಾಗದಲ್ಲಿ ಹರಳುಕಲ್ಲು ಗಣಿಗಾರಿಕೆ ಆರಂಭವಾಗಿದೆ.
ಭೂಮಿಯನ್ನು ನೂರಾರು ಅಡಿಗಳಷ್ಟು ಅಗೆದು ಹರಲು ಕಲ್ಲುಗಳ ಶೋಧ ಕಾರ್ಯ ಮಾಡಲಾಗುತ್ತಿದೆ. ಬ್ರಿಟಿಷರು ಈ ಬೆಟ್ಟವನ್ನು 'ರೆಡ್ ಸ್ಟೋನ್ ವ್ಯಾಲಿ' ಅಂತಾ ಕರೆಯುತ್ತಿದ್ದರು. ಆದರೆ ಆಗ ಜನ ಆ ಬಗ್ಗೆ ಹೆಚ್ಚು ಉತ್ಸುಕರಾಗಿರಲಿಲ್ಲ. ಆ ಬಳಿಕ ಕಲ್ಲು ಹಾಕಿಕೊಂಡರೆ ಒಳಿತಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಬಂದ ಹಿನ್ನಲೆಯಲ್ಲಿ ಈಗ ಆ ಕಲ್ಲಿಗೆ ಬೇಡಿಕೆ ಹೆಚ್ಚಾಗಿದೆ. ಈ ದಂಧೆಗೆ ದಂಧೆಕೋರರು ಮಹಿಳೆಯರು, ಮಕ್ಕಳನ್ನೂ ಬಳಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ಅಲ್ಲದೇ ಈ ದಂಧೆಯಿಂದ ಪೃಕೃತಿ ಗೂ ಅಪಾರ ನಷ್ಟವುಂಟಾಗುತ್ತಿದೆ. ಪುಷ್ಪಗಿರಿಯ ತಳಭಾಗದಲ್ಲಿರುವ ಸುಳ್ಯ ತಾಲೂಕಿನ ಗಡಿ ಗ್ರಾಮಗಳಾದ ಕೊಲ್ಲಮೊಗ್ರು, ಕಲ್ಮಕಾರು, ಬಾಳಿಗೋಡು, ಹರಿಹರ ಮುಂತಾದ ಪ್ರದೇಶಗಳು ಕಳೆದ ಎರಡು ವರ್ಷಗಳಿಂದ ಪ್ರವಾಹ ದ ಪರಿಸ್ಥಿತಿ ಎದುರಿಸುತ್ತಿದೆ. ಬೆಟ್ಟ ಅಗೆದಿರುವ ಕಾರಣ ಭಾರೀ ಮಳೆಗೆ ಮಣ್ಣು ಕುಸಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರವಾಹದ ವೇಳೆಯಲ್ಲೂ ಬೆಟ್ಟದಿಂದ ಹರಳು ಕಲ್ಲುಗಳು ಗ್ರಾಮಸ್ಥರ ಜಮೀನಿಗೆ ಪ್ರವಾಹದ ನೀರಿನಲ್ಲಿ ಬಂದು ಸೇರುತ್ತಿದೆ.
ಒಂದು ಕಾಲದಲ್ಲಿ ಹರಳುಕಲ್ಲು ದಂಧೆಯಿಂದಾಗಿ ಹೊಡೆದಾಟ, ಬಡಿದಾಟ ನಡೆದು ಹಲವು ಮಂದಿಯ ಪ್ರಾಣಕ್ಕೆ ಕುತ್ತು ಬಂದಿತ್ತು. ಸುಟ್ಟತ್ ಮಲೆ ಮತ್ತು ಕೂಜಿಮಲೆ ಹರಳು ಕಲ್ಲಿನ ದಂಧೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಿತ್ತು. ಇದೀಗ ಮತ್ತೆ ಇಲ್ಲಿ ದಂಧೆಯನ್ನು ಸದ್ದಿಲ್ಲದೆ ಆರಂಭಿಸಿರುವುದು ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆ ದಂಧೆಗೆ ಕಡಿವಾಣ ಹಾಕದೆ ಕಣ್ಮುಚ್ಚಿ ಕುಳಿತರೆ ಈ ಬೆಟ್ಟದ ಸಾಲಿನಲ್ಲಿ ಇನ್ನೊಂದಷ್ಟು ಮಂದಿಯ ಹೆಣ ಬೀಳುವುದಂತು ಸತ್ಯ.












Click it and Unblock the Notifications