ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?
ಮಂಗಳೂರು, ಫೆಬ್ರವರಿ 01: ದೇಶದ ಮೋಸ್ಟ್ ವಾಂಟೆಡ್ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೊಲೆ , ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಭೂಗತ ದೊರೆ ಆಫ್ರಿಕಾದ ಸೆನೆಗಲ್ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ದೊರೆ ರವಿ ಪೂಜಾರಿ ವಿರುದ್ಧ ರಾಜ್ಯ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದ್ದರು. ಈತನ ಬಂಧನಕ್ಕೆ ಇಂಟರ್ ಪೋಲ್ ಅಧಿಕಾರಿಗಳ ಸಹಾಯ ಕೇಳಿದ್ದರು. ರಾಜ್ಯ ಮುಂಬಯಿ ಕ್ರೈಂ ಬ್ರಾಂಚ್ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಸೆನೆಗಲ್ ನಲ್ಲಿ ಅಡಗಿದ್ದ ರವಿ ಪೂಜಾರಿಯನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದಾರೆ.
ರವಿ ಪೂಜಾರಿ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದು ಮುಂಬಯಿಯಲ್ಲಾದರೂ ಆತ ಮೂಲತಃ ಉಡುಪಿ ಜಿಲ್ಲೆಯವನು. ಉಡುಪಿ ಬಳಿಯ ಮಲ್ಪೆಯ ಕಲ್ಮಾಡಿಯ ಸೂರ್ಯ ಪೂಜಾರಿ ಎಂಬುವವರ ಪುತ್ರ ರವಿ ಪೂಜಾರಿ ಅರ್ಧದಲ್ಲಿಯೇ ಶಾಲೆ ಬಿಟ್ಟು ದುಡಿಮೆಗೆ ಮುಂಬಯಿಯತ್ತ ಮುಖ ಮಾಡಿದ್ದ.
ಅಲ್ಲಿ ಡ್ಯಾನ್ಸ್ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದೇ ಆತ ಪಾತಕ ಪ್ರಪಂಚಕ್ಕೆ ಎಂಟ್ರಿ ಕೊಟ್ಟಂತಾಗಿತ್ತು.ಒಂದೊಮ್ಮೆ ಮುಂಬಯಿಯ ಪಾತಕ ಲೋಕದ ದೊರೆಯಾಗಿ ಮೆರೆದ ಚೋಟಾರಾಜನ್, ಗುರುಸಾಟಂ ಜತೆ ನಿಕಟ ಸಂಪರ್ಕಕ್ಕೆ ಬಂದ ರವಿ ಪೂಜಾರಿ .
ಬಳಿಕ ಬಾಳಾ ಜಾಲ್ತೆಯ ಕೊಲೆ ಮಾಡಿದ. ಆ ಬಳಿಕ ರವಿ ಪೂಜಾರಿ ಹಿಂದಿರುಗಿ ನೋಡಿಲ್ಲ. ದೇಶದ ಮೋಸ್ಟ್ ವಾಂಟೆಟ್ ದಾವೂದ್ ಇಬ್ರಾಹಿಂ ಸೆಡ್ಡು ಹೊಡೆದು ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ ಭೋಟಾರಾಜನ್ , ಗುರು ಸಾಟಂ ನೊಂದಿಗೆ1996ರಲ್ಲಿ ವಿದೇಶಕ್ಕೆ ಹಾರಿದ್ದ.

102 ಪ್ರಕರಣಗಳು ದಾಖಲಾಗಿವೆ
ತನ್ನದೇ ಗ್ಯಾಂಗ್ ಕಟ್ಟಿ ಕೊಂಡಿದ್ದ ರವಿ ಪೂಜಾರಿ ಆಗಾಗ, ಮುಂಬೈ ಮಾಧ್ಯಮಕ್ಕೆ ಮತ್ತು ಮಂಗಳೂರಿನ ಮಾಧ್ಯಮ ಕೇಂದ್ರಗಳಿಗೆ ಕರೆ ಮಾಡಿ ಕೊಲೆ ಬೆದರಿಕೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದ. ಸಚಿವರು, ಉದ್ಯಮಿಗಳನ್ನು ಬಿಡದ ಈತ ಹಫ್ತಾಕ್ಕಾಗಿ ಬಾಲಿವುಡ್ ಮಂದಿಯನ್ನು ಇನ್ನಿಲ್ಲದಂತೆ ಕಾಡಿದ್ದ. ಹಲವಾರು ಮಂದಿಗೆ ಜೀವಬೆದರಿಕೆ ಹಾಕಿರುವ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ದೇಶಾದ್ಯಂತ ಒಟ್ಟು 102ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 80ಕ್ಕೂ ಮಿಕ್ಕಿ ಪ್ರಕರಣಗಳು ಕರ್ನಾಟಕ ರಾಜ್ಯದಲ್ಲೇ ಇವೆ. ದಾವೂದ್ ಇಬ್ರಾಹಿಂನ ಖಾಸಾ ಶೋಟರ್ ರಶೀದ್ ಮಲಬಾರಿ ಪರ ನ್ಯಾಯಾಲಯದಲ್ಲಿ ವಾದಕ್ಕೆ ಮುಂದಾಗಿದ್ದ ಮಂಗಳೂರಿನ ನ್ಯಾಯವಾದಿ ನೌಷಾದ್ ಕಾಸಿಂ ಅವರನ್ನು 2009ರಲ್ಲಿ ಭೂಗತ ಪಂಟರ್ ಗಳು ಗುಂಡುಹಾರಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರವಿ ಪೂಜಾರಿ ಕೈವಾಡ ಕೇಳಿಬಂದಿತ್ತು.ಇದಲ್ಲದೇ, ಉದ್ಯಮಿಗಳಿಗೆ ಬೆದರಿಕೆ, ಹಫ್ತಾ ವಸೂಲಿ ಹಾಗೂ ಕೊಲೆ ಸಂಚು ಸಂಬಂಧಿಸಿ 20ಕ್ಕೂ ಅಧಿಕ ಪ್ರಕರಣಗಳು ಮಂಗಳೂರಿನಲ್ಲಿ ದಾಖಲಾಗಿವೆ.

ಬೆದರಿಕೆ ಕರೆಗಳು ಬಂದಿದ್ದವು
ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್,ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಬಾಜಿ ಪಾಟೀಲ, ಮಾಜಿ ಸಂಸದ ವಿಜಯ ಸಂಕೇಶ್ವರ, ಉದ್ಯಮಿ ಸಿದ್ದಾರ್ಥ ಆರ್.ಮೆಹ್ತಾ ಅವರಿಗೆ ಅಂತರ್ಜಾಲ ಕರೆ ಮೂಲಕ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದಿದ್ದವು . ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿವೆ. ಇಂಟರ್ ನೆಟ್ ಕರೆಗಳ ಮೂಲಕ ಹಣಕ್ಕೆ ಬೇಡಿಕೆ ಇಡುವ ಈತನಿಂದ ಬಂದಿರುವ ಬೆದರಿಕೆ ಕರೆಗಳ ನಂಬರ್‌ಗಳು ಮತ್ತು ಇಂಟರ್ ನೆಟ್ ಐಪಿಗಳೆಲ್ಲಾ ಆಸ್ಟ್ರೇಲಿಯಾದ್ದೇ ಆಗಿದ್ದವು.

ರೆಡ್ ಕಾರ್ನರ್ ನೋಟಿಸ್ ಜಾರಿ
ರವಿ ಪೂಜಾರಿ ಬಂಧನಕ್ಕೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಆದರೆ, ಆತನ ಮೇಲಿರುವ ಆರೋಪಗಳು, ಆರೋಪಗಳಿಗೆ ಪೂರಕವಾದ ಸಾಕ್ಷಿ, ಆತನ ಬೆರಳಚ್ಚು, ಫೋನ್ ಕರೆಗಳು, ಧ್ವನಿ ಮಾದರಿಗಳು, ಭಾವಚಿತ್ರ, ಆತ ಬಳಸುತ್ತಿರುವ ಪಾಸ್‌ಪೋರ್ಟ್ ಸೇರಿದಂತೆ ಇತ್ಯಾದಿ ಪೂರಕ ಮಾಹಿತಿಯನ್ನು ರಾಜ್ಯ ಹಾಗೂ ಮುಂಬಯಿ ಪೊಲೀಸರು ಕೇಂದ್ರ ಸರಕಾರದ ಮೂಲಕ ಇಂಟರ್ ಪೋಲ್‌ಗೆ ಕಳುಹಿಸಿಕೊಡಬೇಕಿದೆ.

ಚಿತ್ರ ತಾರೆಯರು, ಸಚಿವರುಗಳು ನಿರಾಳ
ಆದರೆ, ವಿದೇಶದಲ್ಲಿ ಅಡಗಿದ್ದ ಈತನನ್ನು ಬಂಧಿಸಿ ಕರೆತರುವ ಪ್ರಯತ್ನಗಳು ಈ ಹಿಂದೆ ನಡೆದಿರಲಿಲ್ಲ. ಆದರೆ, ಇದೀಗ ವ್ಯಕ್ತಿಯೋರ್ವ ನೀಡಿದ ಮಾಹಿತಿಯನ್ವಯ ರವಿ ಪೂಜಾರಿಯನ್ನು ಬಂಧಿಸಿದ್ದಾರೆ. ಎನ್ನಲಾಗಿದೆ. ಪ್ರಸ್ತುತ ಇಂಟರ್ ಪೋಲ್ ಮೂಲಕ ಭಾರತಕ್ಕೆ ಕರೆತರುವ ವ್ಯವಸ್ಥೆಗಳೂ ನಡೆಯುತ್ತಿದೆ ಎನ್ನಲಾಗಿದೆ. ಭೂಗತ ಪಾತಕಿ ರವಿ ಪೂಜಾರಿ ಬಂಧನ ಸುದ್ದಿ ಭೂಗತ ಲೋಕದಲ್ಲಿ ಸಂಚಲನ ಮೂಡಿಸಿದರೆ ಉದ್ಯಮಿಗಳು , ಚಿತ್ರ ತಾರೆಯರು ಹಾಗು ಸಚಿವರುಗಳು ಮಾತ್ರ ನಿರಾಳರಾಗಿದ್ದಾರೆ.












Click it and Unblock the Notifications