ಬೆದ್ರಕಾಡು ಪ್ರದೇಶಕ್ಕೆ ಬಂದ ವಿಚಿತ್ರ ಬಣ್ಣದ ಹಾವು ಕಂಡು ಬೆದರಿದ ಜನ
Recommended Video

ಮಂಗಳೂರು, ಅಕ್ಟೋಬರ್.29 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಚಿತ್ರ ಬಣ್ಣದ ಹಾವೊಂದು ಪತ್ತೆಯಾಗಿದೆ. ಇದೀಗ ಈ ಹಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಚರ್ಚೆಗಳು ಆರಂಭವಾಗಿದೆ. ಈ ಹಾವು ನೋಡಲು ಭಾರೀ ವಿಷಪೂರಿತ ಹಾವು ಕೊಲಂಬಿಯಾ ಕಿಂಗ್ ಸ್ನೇಕ್ ನಂತೆ ಕಾಣುತ್ತಿದ್ದು, ಅದರ ಬಣ್ಣ, ಆಕಾರ, ವಿಚಿತ್ರವಾಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.
ಈ ಅಪರೂಪದ ಹಾವು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬೆದ್ರಕಾಡು ಪ್ರದೇಶದ ನಿವಾಸಿ ಓಡಿಯಪ್ಪ ಗೌಡ ಅವರ ಮನೆಯಲ್ಲಿ ಕಂಡುಬಂದಿದೆ. ಬಿಳಿ ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿರುವ ಈ ಹಾವು 6 ಅಡಿ ಉದ್ದವಿದೆ.
ಈ ಪ್ರದೇಶದಲ್ಲಿ ಹಾವುಗಳ ಸಂಚಾರ ಸಾಮಾನ್ಯ . ಇಲ್ಲಿ ನಾಗರ ಹಾವು , ಬೃಹತ್ ಕಾಳಿಂಗ ಸರ್ಪ, ಬೃಹತ್ ಗಾತ್ರದ ಹೆಬ್ಬಾವುಗಳನ್ನು ಕಂಡಿರುವ ಸ್ಥಳೀಯ ಜನರು ಸಂಚರಿಸುವಾಗಲೇ ಬುಸುಗುಡುವ ಈ ಹಾವು ಕಂಡು ಚಕಿತಗೊಂಡಿದ್ದಾರೆ.

ಇದು ಇಲ್ಲಿದ್ದರೆ ತೊಂದರೆ ಎಂದು ಮನಗಂಡ ಓಡಿಯಪ್ಪ ಗೌಡ ಅವರು ತಕ್ಷಣ ಸ್ಥಳೀಯ ಉರಗತಜ್ಞ ಲಿಂಗಪ್ಪ ಮಾಚಾರು ಅವರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಲಿಂಗಪ್ಪ ಮಾಚಾರ ಈ ಅಪರೂಪದ ಹಾವಿನ ಆಕಾರ, ಬಣ್ಣ ಕಂಡು ಒಂದೊಮ್ಮೆ ಚಕಿತಗೊಂಡರು. ತಮ್ಮ ಜೀವಮಾನದಲ್ಲಿ ಇಂತಹ ಬಣ್ಣದ ಹಾವನ್ನು ಕಂಡಿಲ್ಲ ಎಂದ ಲಿಂಗಪ್ಪ ಮಾಚಾರ ಅತ್ಯಂತ ಚಾಕಚಕ್ಯತೆಯಿಂದ ಹಾವನ್ನು ಹಿಡಿಯುವಲ್ಲಿ ಸಫಲರಾದರು.

ಹಾವನ್ನು ಸುರಕ್ಷಿತವಾಗಿ ಹಿಡಿದ ಲಿಂಗಪ್ಪ ಮಾಚಾರು ನಂತರ ಅದನ್ನು ಮಂಗಳೂರಿನ ಪಿಲಿಕುಲ ನಿಸರ್ಗಧಾಮಕ್ಕೆ ನೀಡಿದ್ದಾರೆ. ಸೆರೆಯಾಗಿರುವ ಹಾವಿನ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.












Click it and Unblock the Notifications