ನಳಿನ್ ವೈಫಲ್ಯವೇ ದ.ಕ.ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ:ರಮಾನಾಥ್ ರೈ
ಮಂಗಳೂರು, ಮಾರ್ಚ್ 28: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರತೊಡಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಆರಂಭಿಸಿದೆ. ನಳಿನ್ ಕುಮಾರ್ ಕಟೀಲ್ ಅವರ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಟಾರ್ಗೆಟ್ ಮಾಡುತ್ತಿದೆ.
ಈ ಕುರಿತು ಮಾತನಾಡಿರುವ ಮಾಜಿ ಸಚಿವ ರಮಾನಾಥ್ ರೈ, ಕಳೆದ ಹತ್ತು ವರ್ಷಗಳಿಂದ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಅಭಿವೃದ್ದಿಗೆ ನೀಡಿದ ಕೊಡುಗೆ ಏನೇನೂ ಇಲ್ಲ. ಇವರ ವೈಫಲ್ಯವೇ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಡಬದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮಾನಾಥ್ ರೈ, ಬಿಜೆಪಿ ಜಿಲ್ಲೆಯಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನು ಮರಳು ಮಾಡುತ್ತಿದೆ. ಜನರನ್ನು ಮೋಸ ಮಾಡಿ ಕೋಮು ಭಾವನೆಗಳನ್ನು ಕೆರಳಿಸಿ ಅದನ್ನೇ ಮತಗಳಾಗಿ ಪರಿವರ್ತಿಸಿ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದೆ ಎಂದು ಕಿಡಿಕಾರಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಗೆಲ್ಲುತ್ತಾ ಬಂದಿರುವುದು ನಮ್ಮ ಜಿಲ್ಲೆಯ ದುರಂತ ಎಂದು ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದರು ಇರುವಾಗ ಮಂಗಳೂರಿನ ಬಂದರು, ವಿವಿಧ ಕೈಗಾರಿಕೆಗಳು, ರೈಲ್ವೆ ನಿಲ್ದಾಣ, ಪಾಸ್ ಪೋರ್ಟ್, ಪ್ರಾದೇಶಿಕ ಕಚೇರಿಗಳು, ವಿಮಾನ ನಿಲ್ದಾಣ, ಮುಂತಾದ ಮಹತ್ತರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಬಿಜೆಪಿ ಸಂಸದರ ಕೊಡುಗೆ ಈ ಜಿಲ್ಲೆಗೇನು ? ಎಂದು ರಮಾನಾಥ್ ರೈ ಪ್ರಶ್ನಿಸಿದರು.












Click it and Unblock the Notifications