ಗೃಹ ಖಾತೆಗೆ ರೈ ನಾಲಾಯಕ್ : ಕಾಂಗ್ರೆಸ್ ನಾಯಕ ವಿಜಯ ಕುಮಾರ್ ಶೆಟ್ಟಿ
ಮಂಗಳೂರು, ಆಗಸ್ಟ್ 30: ಬಂಟ್ವಾಳದ ಶಾಸಕ ಮತ್ತು ಅರಣ್ಯ ಸಚಿವ ರಮಾನಾಥ್ ರೈ ಅವರಿಗೆ ತೆರವಾಗಿರುವ ಗೃಹ ಖಾತೆ ಸಚಿವ ಸ್ಥಾನ ಸಿಗಲಿ ಎಂದು ಒಂದೆಡೆ ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನೊಂದೆಡೆ ಸ್ವತಃ ಕಾಂಗ್ರೆಸ್ ನ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ರಮಾನಾಥ ರೈ 'ಗೃಹ ಸಚಿವ ಸ್ಥಾನಕ್ಕೆ ನಾಲಾಯಕ್. ಆತ ಒಬ್ಬ ರೌಡಿ, ಅಂಥವರಿಗೆ ಗೃಹ ಸಚಿವ ಸ್ಥಾನ ಕೊಡಬಾರದು,' ಎಂದು ಕಿಡಿಕಾರಿದರು.
'ಒನ್ಇಂಡಿಯಾ ಕನ್ನಡ'ದ ಜತೆ ಮಾತನಾಡಿದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, "ರಮಾನಾಥ ರೈ ಮೇಲೆ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಅವರು ಒಬ್ಬ ರೌಡಿ. ಇಂಥವರಿಗೆ ಗೃಹ ಸಚಿವ ಸ್ಥಾನದಂಥ ದೊಡ್ಡ ಹುದ್ದೆ ಕೊಡುವುದು ಸಿಎಂ ಸಿದ್ದರಾಮಯ್ಯನವರ ದೌರ್ಭಾಗ್ಯ," ಎಂದು ಟೀಕಿಸಿದರು.

ಪೊಲೀಸ್ ಠಾಣೆ ಹಾಗೂ ಕೋರ್ಟಿನಲ್ಲಿ ರೌಡಿ ಎಂಬ ಪಟ್ಟ ಗಿಟ್ಟಿಸಿದವರಿಗೆ ಸಚಿವ ಸ್ಥಾನ ನೀಡುವುದು ಎಲ್ಲಾದ್ರೂ ಉಂಟೆ? ಎಂದು ಅವರು ಪ್ರಶ್ನಿಸಿದರು.
Recommended Video

"ಜನರಿಗೆ ಅದರಲ್ಲೂ ಬಡವರಿಗೆ ಬೆನ್ನೆಲುಬಾಗಿ ನಿಂತ ಒಂದೇ ಪಕ್ಷ ಅಂದ್ರೆ ಕಾಂಗ್ರೆಸ್ ಪಕ್ಷ. ಅಂತ ಪಕ್ಷದಲ್ಲಿ ರಮಾನಾಥ ರೈಯವರು ಈ ಹಿಂದೆ 1992ರಲ್ಲಿ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಹಾಯಕ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಮಂಗಳೂರಿನಲ್ಲಿ ರೌಡಿಸಂ ಮತ್ತು ಬೇಡದ ಕೃತ್ಯಗಳನ್ನು ಎಸಗಿ ವಿಟ್ಲ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು," ಎಂದು ಹೇಳಿದರು.
ರಮಾನಾಥ ರೈಯವರು ಅರಣ್ಯ ಸಚಿವರಾಗಿದ್ದು, ಅದರಲ್ಲಿಯೇ ಕೆಲಸ ನಿರ್ವಹಿಸಲು ಜ್ಞಾನವಿಲ್ಲದ ಇವರಿಗೆ ಗೃಹ ಸಚಿವ ಸ್ಥಾನ ಕೊಟ್ಟರೆ ಏನು ಗತಿ? ರೈಗೆ ಗೃಹ ಸಚಿವ ಸ್ಥಾನ ಕೊಟ್ಟಲ್ಲಿ ಅದು ಕಾಂಗ್ರೆಸ್ಸಿಗರ ಭಾಗ್ಯವೋ ಅಥವಾ ಸಿಎಂ ಸಿದ್ದರಾಮಯ್ಯನವರ ದೌರ್ಭಾಗ್ಯವೋ ಆ ದೇವನೇ ಬಲ್ಲ ಎಂದರು.












Click it and Unblock the Notifications