ಕರಾವಳಿ ಭಾಗದ ಜನರ ಕೂಗಿಗೆ ಮಣಿದ ಭಾರತೀಯ ರೈಲ್ವೆ
ಮಂಗಳೂರು, ಸೆಪ್ಟೆಂಬರ್ 25; ಕರ್ನಾಟಕದ ಕರಾವಳಿ ಭಾಗದ ಜನರ ಬೇಡಿಕೆಗೆ ರೈಲ್ವೆ ಇಲಾಖೆ ಮುನ್ನಣೆ ನೀಡಿದೆ. ಬೆಂಗಳೂರು-ಕಣ್ಣೂರು ವಯಾ ಮಂಗಳೂರು ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡುವುದಿಲ್ಲ ಎಂದು ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ರೈಲು ನಂಬರ್ 16511/ 12 ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡಬಾರದು ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ರೈಲ್ವೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

ದಕ್ಷಿಣ ರೈಲ್ವೆ ಬೆಂಗಳೂರು-ಕಣ್ಣೂರು ವಯಾ ಮಂಗಳೂರು ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಪ್ರಸ್ತಾಪವಿಟ್ಟಿತ್ತು. ಆದರೆ ಈ ರೈಲು ವಿಸ್ತರಣೆಗೊಂಡರೆ ಕರ್ನಾಟಕದ ಕರಾವಳಿ ಭಾಗದ ಪ್ರಯಾಣಿಕರಿಗೆ ಅನ್ಯಾಯವಾಗಲಿದೆ, ಹೆಚ್ಚು ಸೀಟುಗಳು ಕೇರಳ ಭಾಗದ ಪ್ರಯಾಣಿಕರ ಪಾಲಾಗಲಿವೆ ಎಂಬ ವಾದ ಮುಂದಿಟ್ಟು ರೈಲು ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಲಾಗಿತ್ತು.
ಸಂಸದರಿಂದ ಅಧಿಕಾರಿಗಳ ಭೇಟಿ; ದಕ್ಷಿಣ ರೈಲ್ವೆ ಪ್ರಸ್ತಾವನೆಯನ್ನು ಮುಂದಿಟ್ಟುಕೊಂಡು ಕೋಯಿಕ್ಕೋಡ್ ಸಂಸದ ಎಂ. ಕೆ. ರಾಘವನ್ ಕೆಲವು ದಿನಗಳ ಹಿಂದೆ ರೈಲ್ವೆ ಸಚಿವಾಲಯದ ಸಿಇಒ ಜಯ ವರ್ಮಾ ಸಿನ್ಹಾ ಭೇಟಿ ಮಾಡಿದ್ದರು. ಕೋಯಿಕ್ಕೋಡ್ ತನಕ ರೈಲು ಸೇವೆ ವಿಸ್ತರಣೆ ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಸಂಸದ ನಳಿನ್ ಕುಮಾರ್ ಕಟೀಲ್, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಬೆಂಗಳೂರು-ಕಣ್ಣೂರು ವಯಾ ಮಂಗಳೂರು ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡಲು ವಿರೋಧ ವ್ಯಕ್ತಪಡಿಸಿದ್ದವು. ಈಗ ರೈಲ್ವೆ ಸಚಿವರು ಸಹ ಈ ಕುರಿತು ಭರವಸೆ ನೀಡಿದ್ದಾರೆ.
ಕಣ್ಣೂರು-ಬೆಂಗಳೂರು ನಡುವೆ ಪ್ರತಿದಿನ ರೈಲು (16528) ಇರುವಾಗ ಬೆಂಗಳೂರು-ಕಣ್ಣೂರು ವಯಾ ಮಂಗಳೂರು ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡುವ ಉದ್ದೇಶವೇನು? ಎಂದು ಪ್ರಯಾಣಿಕರ ಪ್ರಶ್ನೆ ಮಾಡಿದ್ದರು. ಕರಾವಳಿ ಮತ್ತು ರಾಜಧಾನಿ ನಡುವಿನ ಸಂಪರ್ಕ ರೈಲಿನಲ್ಲಿ ಕರಾವಳಿ ಭಾಗದ ಜನರಿಗೆ ಹೆಚ್ಚಿನ ಸೀಟು ಲಭ್ಯವಾಗಬೇಕು ಎಂದು ವಾದಿಸಿದ್ದರು.
ಈ ಹಿಂದೆ ಯಶವಂತಪುರ-ಮಂಗಳೂರು ರಾತ್ರಿ ರೈಲನ್ನು ಕಣ್ಣೂರು ತನಕ ವಿಸ್ತರಣೆ ಮಾಡಲು ವಿರೋಧ ವ್ಯಕ್ತವಾಗಿತ್ತು. ಈಗ ಕರಾವಳಿ ಭಾಗದ ಮತ್ತೊಂದು ರೈಲನ್ನು ಕೇರಳ ತನಕ ವಿಸ್ತರಣೆ ಮಾಡುವ ಉದ್ದೇಶವೇನು? ಎಂದು ಪ್ರಯಾಣಿಕರು ಪ್ರಶ್ನಿಸಿದ್ದರು.
ಬೆಂಗಳೂರು-ಕಣ್ಣೂರು ವಯಾ ಮಂಗಳೂರು ರೈಲನ್ನು ಕೋಯಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ರೈಲಿನ ಪ್ರಯಾಣ 15 ಗಂಟೆ ಆಗುತ್ತದೆ. ಬೆಂಗಳೂರಿನಿಂದ ಕೊಯಿಕ್ಕೋಡ್‌ಗೆ ಬಸ್‌ನಲ್ಲಿಯೇ 12 ಗಂಟೆಯಲ್ಲಿ ಸಂಚಾರ ನಡೆಸಬಹುದು. ರೈಲು ಸೇವೆ ವಿಸ್ತರಣೆಯಿಂದ ಯಾರಿಗೂ ಲಾಭವಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.
ಬೆಂಗಳೂರು-ಕಣ್ಣೂರು ವಯಾ ಮಂಗಳೂರು ರೈಲಿನಿಂದಾಗಿ ಹಾಸನ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ ಪ್ರಯಾಣಿಕರಿಗೆ ಸಹ ಲಾಭವಾಗುತ್ತಿದೆ. ಆದ್ದರಿಂದ ರೈಲನ್ನು ವಿಸ್ತರಣೆ ಮಾಡಬಾರದು ಎಂದು ಪ್ರಯಾಣಿಕರ ಸಂಘಗಳು ಇಲಾಖೆಯನ್ನು ಒತ್ತಾಯಿಸಿದ್ದವು.
ಸಂಸದರು ಇಟ್ಟ ಬೇಡಿಕೆಗಳು
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿಯಾದಾಗ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
* ಕರಾವಳಿ ಕರ್ನಾಟಕವನ್ನು ದಕ್ಷಿಣ ರೈಲ್ವೆಯಿಂದ ಬೇರ್ಪಡಿಸಿ ನೈರುತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಸೇರಿಸಲು ಮನವಿ ಮಾಡಲಾಗಿದೆ.
* ಕರಾವಳಿಗೆ ವಂದೇ ಭಾರತ್ ರೈಲಿಗಾಗಿ ಬೇಡಿಕೆ ಇಟ್ಟಿದ್ದಾರೆ. ಮಂಗಳೂರು-ಗೋವಾ ನಡುವೆ ವಂದೇ ಭಾರತ್ ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.
* ಮಂಗಳೂರು ಜಂಕ್ಷನ್ ಕೊಂಕಣ ರೈಲ್ವೆ ನಡುವೆ ಓಡುವ ರೈಲುಗಳ ಅನಗತ್ಯ ವಿಳಂಬದ ಸಮಸ್ಯೆ ಪರಿಹಾರಕ್ಕೆ ಸಂಸದರು ಒತ್ತಾಯಿಸಿದ್ದಾರೆ.












Click it and Unblock the Notifications