ಶೀಘ್ರದಲ್ಲೇ ಸ್ಥಾಪನೆಯಾಗಲಿದೆ ರೈಲ್ವೆ ವಿಶ್ವವಿದ್ಯಾಲಯ
ಮಂಗಳೂರು, ಆ.18 : ರೈಲ್ವೆ ಇಲಾಖೆಯ ಎಲ್ಲಾ ವಿಭಾಗಗಳ ಬಗ್ಗೆ ಸಿಬ್ಬಂದಿಗಳಿಗೆ ತರಬೇತಿ ನೀಡಲು ರೈಲ್ವೆ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಡಿಸೆಂಬರ್‌ವೇಳೆಗೆ ವಿವಿಯ ಪಠ್ಯಕ್ರಮದ ಕುರಿತ ಕೆಲಸ ಅಂತಿಮಗೊಳ್ಳಲಿದ್ದು, ನಂತರ ಉಳಿದ ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸದಾನಂದ ಗೌಡರು, ಚೀನಾ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಈ ರೀತಿಯ ವಿಶ್ವವಿದ್ಯಾನಿಲಯಗಳಿವೆ. ಭಾರತದಲ್ಲಿಯೂ ರೈಲ್ವೆ ವಿಶ್ವವಿದ್ಯಾನಿಲಯ ಸ್ಥಾಪಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದರು.

ರೈಲ್ವೆ ವಿಶ್ವವಿದ್ಯಾಲಯದ ಪಠ್ಯಕ್ರಮ ಸೇರಿದಂತೆ ಇತರ ಅಗತ್ಯತೆಗಳ ಬಗ್ಗೆ ಡಿಸೆಂಬರ್‌ನೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಮುಂದಿನ ಕಾರ್ಯ ಆರಂಭಿಸಲಾಗುತ್ತದೆ. ಬರೋಡದಲ್ಲಿ ವಿವಿ ಸ್ಥಾಪಿಸಲು ಸದ್ಯ ಇಲಾಖೆಯಲ್ಲಿ 80 ಎಕರೆ ಜಾಗ ಲಭ್ಯವಿದೆ ಎಂದು ಹೇಳಿದರು. ದೇಶದ ನಾಲ್ಕು ಸ್ಥಳಗಳಲ್ಲಿ ವಿವಿ ಸ್ಥಾಪಿಸುವ ಉದ್ದೇಶವಿದೆ ಎಂದರು. [ರೈಲ್ವೆ ನೌಕರರಿಗೆ ಕನ್ನಡ ಕಲಿಕಾ ಶಿಬಿರ]
ರೈಲ್ವೆ ಇಲಾಖೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ ಸಚಿವರು, ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲುಗಳಲ್ಲಿ 25 ಸಾವಿರ ಬಯೋ ಟಾಯ್ಲೆಟ್ ರಚನೆಗೆ ನಿರ್ಧರಿಸಲಾಗಿದೆ ಎಂದರು. ರೈಲ್ವೆ ಇಲಾಖೆಯಿಂದ ತುರ್ತಾಗಿ ಆಗಬೇಕಾದ ಕೆಲಸ ಕಾರ್ಯದ ಬಗ್ಗೆ ಮಾಹಿತಿ ನೀಡುವಂತೆ ಪ್ರತಿ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ ಎಂದು ಸಚಿವರು ಹೇಳಿದರು.
ಮಂಗಳೂರು ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಹಿಂದಿನ ಸರ್ಕಾರದ ಪ್ರಸ್ತಾವನೆಗೆ ಒತ್ತು ನೀಡಲಾಗಿದ್ದು, ಈ ಬಗ್ಗೆ ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ 215 ಕೋಟಿ ರೂ.ಗಳ ಕಾಮಗಾರಿ ಕೈಗೆತ್ತಿಗೊಳ್ಳಲಾಗುವುದು ಎಂದು ಸದಾನಂದ ಗೌಡರು ತಿಳಿಸಿದರು.

ಕೆಳಸೇತುವೆ ಕಾಮಗಾರಿಗೆ ಶಂಕು : ಪಡೀಲ್ - ಬಜಾಲ್ ವ್ಯಾಪ್ತಿಯ ಜನರ 30 ವರ್ಷಗಳ ಬೇಡಿಕೆಯಾಗಿದ್ದ ಕಂಕನಾಡಿ ಪಡೀಲ್ ರೈಲ್ವೆ ಕೆಳ ಸೇತುವೆಗೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 5.61 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ.












Click it and Unblock the Notifications