ರಾಘವೇಶ್ವರ ಶ್ರೀ ಪ್ರಕರಣ, ಪುತ್ತೂರಿನಲ್ಲಿ ಸಿಐಡಿ ತಂಡ
ಮಂಗಳೂರು, ಜು.02 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಎರಡು ದಿನಗಳ ಕಾಲ ಪುತ್ತೂರಿನಲ್ಲಿ ವಿಚಾರಣೆ ನಡೆಸಿದ್ದಾರೆ. ಜುಲೈ 15ರ ವೇಳೆಗೆ ಮಧ್ಯಂತರ ವರದಿ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಸ್ವಾಮೀಜಿಗಳ ವಿರುದ್ಧ ದೂರು ನೀಡಿರುವ ಗಾಯಕಿ ಪ್ರೇಮಲತಾ ದಿವಾಕರ್ ಮತ್ತು ಅವರ ಪತಿ ದಿವಾಕರ ಶಾಸ್ತ್ರಿ ದಂಪತಿಗಳನ್ನು ಪುತ್ತೂರಿಗೆ ಕರೆದುಕೊಂಡು ಹೋಗಿದ್ದ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದೆ. ಮಂಗಳವಾರ ಹೊರನಾಡಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು. [ತನಿಖೆ ರದ್ದು ಕೋರಿದ ಶ್ರೀಗಳು]

ಸಿಐಡಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದ ತಂಡ ಈ ವಿಚಾರಣೆಯನ್ನು ನಡೆಸುತ್ತಿದೆ. ಪೆರಾಜೆಯಲ್ಲಿರುವ ರಾಮಚಂದ್ರಾಪುರ ಶಾಖಾ ಮಠಕ್ಕೂ ಭೇಟಿ ನೀಡಿ ಅಧಿಕಾರಿಗಳು ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ಪುತ್ತೂರಿನಲ್ಲಿ ಎರಡು ವರ್ಷಗಳ ಹಿಂದೆ ರಾಘವೇಶ್ವರ ಶ್ರೀಗಳು ರಾಮಕಥಾ ಕಾರ್ಯಕ್ರಮವನ್ನು ನಡೆಸಿದ್ದರು. [ಶ್ರೀಗಳ ಜಾಮೀನು ರದ್ದುಗೊಳಿಸಲು ಸಾಧ್ಯವಿಲ್ಲ]
ಆತ್ಮಹತ್ಯೆ ಬಗ್ಗೆಯೂ ಮಾಹಿತಿ ಸಂಗ್ರಹ : ಸಿಐಡಿ ಅಧಿಕಾರಿಗಳು ಶ್ಯಾಮ ಪ್ರಸಾದ್ ಶಾಸ್ತ್ರಿಗಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಪೂತ್ತೂರಿನ ಕೆದಿಲ ನಿವಾಸಿಯಾಗಿದ್ದ ಶಾಸ್ತ್ರಿಗಳು 2014ರ ಆಗಸ್ಟ್‌ನಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಈ ಪ್ರಕರಣದ ಬಗ್ಗೆಯೂ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ಮುಂದೂಡಿಕೆ : ಅತ್ಯಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಸಿಐಡಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಜುಲೈ1ರ ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿದೆ.
ಶೀಘ್ರದಲ್ಲೇ ಮಧ್ಯಂತರ ವರದಿ : ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪದ ತನಿಖೆ ಪೂರ್ಣಗೊಳ್ಳುತ್ತಾ ಬಂದಿದ್ದು, ಜುಲೈ 15ರ ವೇಳೆಗೆ ಮಧ್ಯಂತರ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಮದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications