ಪುನೀತ್ ಸಾಧನೆ ಯುವಕರಿಗೆ ಸ್ಪೂರ್ತಿ: ಡಾ. ವೀರೇಂದ್ರ ಹೆಗ್ಗಡೆ
ಮಂಗಳೂರು, ನವೆಂಬರ್ 1: ಕರ್ನಾಟಕ ಸರಕಾರ ದಿವಂಗತ ನಟ ಪುನೀತ್ ರಾಜ್ ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. 67ನೇ ಕನ್ನಡ ರಾಜ್ಯೋತ್ಸವವನ್ನು ಸರಕಾರವೂ ಆಚರಿಸುತ್ತಿದ್ದು, ಸಂಭ್ರಮದ ದಿನ ಕನ್ನಡಿಗರ ನೆಚ್ಚಿನ ನಟ ದಿವಂಗತ ಡಾ. ಪುನೀತ್ ರಾಜ್ ಕುಮಾರ್‌ಗೆ ಕರ್ನಾಟಕ ರತ್ನ( ಮರಣೋತ್ತರ) ಪ್ರಶಸ್ತಿಯನ್ನು ನೀಡಿ ಗೌರವಿಸಲಿದೆ.
ಕರ್ನಾಟಕ ರತ್ನ ಪ್ರಶಸ್ತಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯ ಪದಕ 50 ಗ್ರಾಂ ತೂಕದ ಚಿನ್ನದ ಪದಕವನ್ನು ಹೊಂದಿದೆ. ಇದರ ಜೊತೆಗೆ ನೆನಪಿನ ಕಾಣಿಕೆ ಹಾಗೂ ಶಾಲನ್ನು ಹೊದಿಸಿ ಗೌರವಿಸಲಾಗುತ್ತದೆ. ಇಲ್ಲಿಯವರೆಗೆ ಒಟ್ಟು 9 ಜನ ಮಹನಿಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಕೊನೆಯ ಬಾರಿ 2009ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದ ಧರ್ಮಸ್ಥಳಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
"ಪುನೀತ್ ರಾಜ್ ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಇಂದು ಆ ಯುವಕನನ್ನು ನಾನು ಸ್ಮರಿಸುತ್ತೇನೆ. ಯಾಕಂದರೆ ಅವರ ತಂದೆ ಡಾ. ರಾಜ್ ಕುಮಾರ್ ನನಗೆ ಅತ್ಯಂತ ಪ್ರೀತಿಯವರು ಮತ್ತು ಕ್ಷೇತ್ರದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅವರ ಪುತ್ರ ಪುನೀತ್ ತಮ್ಮ ವೈಯಕ್ತಿಕ ವ್ಯಕ್ತಿತ್ವ, ನಟನೆ ಮತ್ತು ಸ್ವಭಾವದಿಂದ ಪ್ರೀತಿ ಪಾತ್ರರಾಗಿದ್ದರು. ಅವರ ಸಾವು ಇನ್ನೂ ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ, ಇಂತಹ ಸಾವು ಅಂತ ದೊಡ್ಡ ಮತ್ತು ಭವಿಷ್ಯವಿದ್ದ ಕಲಾವಿದನಿಗೆ ಬರಬಾರದಿತ್ತು" ಎಂದು ಅಭಿಪ್ರಾಯಪಟ್ಟರು.
"ಭಗವಂತದ ಪಾದ ಸೇರಿರುವ ಪುನೀತ್‌ರನ್ನು ಇವತ್ತು ಸ್ಮರಿಸುತ್ತೇನೆ. ಕುಟುಂಬಕ್ಕೆ ಸಾಂತ್ವನ ಹೇಳುತ್ತಾ, ಕರ್ನಾಟಕ ರತ್ನ ಪ್ರಶಸ್ತಿಗೆ ಪುನೀತ್ ಅರ್ಹನಾದ ವ್ಯಕ್ತಿ ಮುಂದೆ ಎಲ್ಲಾ ಕಲಾವಿದರಿಗೂ ಇವರು ಸ್ಪೂರ್ತಿಯಾಗಿರಲಿ. ಕನ್ನಡದ ಸೇವೆ, ಸ್ವಭಾವತ ಸ್ನೇಹಪರರಾಗಿದ್ದರೆ ಜನ ಮತ್ತು ಸರ್ಕಾರ ಹೇಗೆ ನಮ್ಮನ್ನ ಸ್ಮರಿಸಿಕೊಳ್ಳುತ್ತದೆ ಎನ್ನುವುದು ಎಲ್ಲಾ ಕಲಾವಿದರಿಗೂ ಪುನೀತ್ ಮಾದರಿಯಾಗಿದ್ದಾರೆ" ಎಂದರು.

"ಪುನೀತ್‌ರ ಪುಣ್ಯದಿಂದ ಮತ್ತಷ್ಟು ಉತ್ತಮ ಕಲಾವಿದರು ಮೂಡಿ ಬರಲಿ ಅಂತ ಹಾರೈಸುತ್ತೇನೆ. ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾದ ಪುನೀತ್‌ಗೆ ಅಭಿನಂದಿಸುತ್ತೇನೆ" ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
1991ರಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ಗಣ್ಯರಿಗೆ ಮಾತ್ರ ನೀಡಲಾಗುತ್ತದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು 1992ರಲ್ಲಿ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದ ಮಹಾಕವಿ ಕುವೆಂಪು ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದ ವರನಟ ಡಾ.ರಾಜ್ ಕುಮಾರ್‌ಗೆ ಅವರಿಗೆ ನೀಡಲಾಗಿತ್ತು.
1999ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, 2000ರಲ್ಲಿ ವಿಜ್ಞಾನಿ ಸಿ. ಎನ್. ಆರ್. ರಾವ್, 2001ರಲ್ಲಿ ಖ್ಯಾತ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ, 2005ರಲ್ಲಿ ಸಂಗೀತ ಮಾಂತ್ರಿಕ ಭೀಮಸೇನ ಜೋಷಿ, 2007ರಲ್ಲಿ ಸಾಮಾಜಿಕ ಸೇವೆಗೆ ಸಿದ್ದಗಂಗೆ ಶ್ರೀ ಶಿವಕುಮಾರ ಸ್ವಾಮೀಗಳಿಗೆ, 2008ರಲ್ಲಿ ಸಾಹಿತಿ ದೇ. ಜವರೇಗೌಡರಿಗೆ, 2009ರಲ್ಲಿ ಸಾಮಾಜಿಕ ಸೇವೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ನೀಡಲಾಗಿತ್ತು. ಇದೀಗ ಈ ಮಹನೀಯರ ಸಾಲಿಗೆ ದಿ. ಪುನೀತ್ ರಾಜ್‌ಕುಮಾರ್ ಸೇರಿಕೊಂಡಿದ್ದಾರೆ.












Click it and Unblock the Notifications