ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು
ಮಂಗಳೂರು, ಏಪ್ರಿಲ್ 9: ಕರಾವಳಿಯ ತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ.
ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ ಮತ್ತು ಸುಳ್ಯ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳಾಗಿವೆ. ಈ 8 ಕ್ಷೇತ್ರಗಳಲ್ಲಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನುಳಿದ ಒಂದು ಅಂದರೆ ಸುಳ್ಯ ಮಾತ್ರ ಬಿಜೆಪಿ ಕೈಯಲ್ಲಿದೆ.
ಕ್ಷೇತ್ರ ಪರಿಚಯ: ಮಂಗಳೂರು ನಗರ ದಕ್ಷಿಣ ಮತ್ತೆ ಬಿಜೆಪಿ ತೆಕ್ಕೆಗೆ?
ಈ ಕ್ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹಾಗೂ ಈ ಬಾರಿ ಯಾರ ಯಾರ ನಡುವೆ ಪೈಪೋಟಿ ಇದೆ. ಸಮಗ್ರ ಮಾಹಿತಿ ಇಲ್ಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಮಂಗಳೂರಿನಲ್ಲಿ ಖಾದರ್ ವರ್ಸಸ್ ಇತರರು
ಕಾಂಗ್ರೆಸ್- ಯು.ಟಿ.ಖಾದರ್
ಬಿಜೆಪಿ- ಸತೀಶ್ ಕುಂಪಲ/ ಸಂತೋಷ್ ಕುಮಾರ್ ರೈ ಬೋಳಿಯಾರ್/ ರಹೀಮ್ ಉಚ್ಚಿಲ್
ಜೆಡಿಎಸ್ - ರವೂಫ್ ಪುತ್ತಿಗೆ
ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಹಾಗೂ ಸಚಿವರಾದ ಯು.ಟಿ ಖಾದರ್ ಕಣಕ್ಕಿಳಿಯಲಿದ್ದಾರೆ. ಖಾದರ್ ಈ ಕ್ಷೇತ್ರದಲ್ಲಿ ಸತತವಾಗಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದು ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ತಮ್ಮ ಪ್ರಚಾರ ಶೈಲಿ ಹಾಗೂ ಅಭಿವೃದ್ದಿ ವಿಚಾರಗಳನ್ನೇ ಮುಂದಿಟ್ಟುಕೊಂಡು ಖಾದರ್ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿಗೆ ಸೂಕ್ತ ಅಭ್ಯರ್ಥಿ ಇಲ್ಲ. ಸದ್ಯ ಮೂವರು ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಪೈಕಿ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್ ಅಥವಾ ರಹೀಮ್ ಉಚ್ಚಿಲ್ ಗೆ ಟಿಕೆಟ್ ಒಲಿಯಲಿದೆ. ಇನ್ನು ಜೆ.ಡಿ.ಎಸ್ ಹಾಗೂ ಎಸ್.ಡಿ.ಪಿಐ ಕೂಡಾ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲಿದೆ.

ಮಂಗಳೂರು ಉತ್ತರದಲ್ಲಿ ಬಾವಾ, ಪಾಲೇಮಾರ್, ಕಾಟಿಪಳ್ಳ ಹೋರಾಟ
ಕಾಂಗ್ರೆಸ್- ಮೊಯ್ದೀನ್ ಬಾವಾ
ಬಿಜೆಪಿ-ಕೃಷ್ಣ ಜೆ.ಪಾಲೇಮಾರ್
ಸಿಪಿಐ(ಎಂ) - ಮುನೀರ್ ಕಾಟಿಪಳ್ಳ
ಜೆಡಿಎಸ್- ಅಸ್ವಿತ್ವ ಇಲ್ಲ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಈ ಬಾರಿ ಪೈಪೋಟಿಯ ಕ್ಷೇತ್ರವಾಗಿದೆ. ಹಾಲಿ ಶಾಸಕ ಮೊಯ್ದೀನ್ ಬಾವಾಗೆ ಕ್ಷೇತ್ರದಲ್ಲಿ ನಡೆದ ಕೋಮು ಆಧಾರಿತ ಕೊಲೆ ಪ್ರಕರಣಗಳು ಹಾಗೂ ಪಾತಕ ಚಟುವಟಿಕೆಗಳು ಮುಳುವಾಗುವ ಸಾಧ್ಯತೆ ಇದೆ.
ಮತ್ತೊಂದೆಡೆ ಕಳೆದ ಬಾರಿ ಸೋಲುಂಡ ಬಿಜೆಪಿ ಅಭ್ಯರ್ಥಿಕೃಷ್ಣಾ ಪಾಲೇಮಾರ್ ಈ ಬಾರಿಯೂ ಬಿಜೆಪಿಯಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಆದ್ರೆ ಈ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಇತರ ಆಕಾಂಕ್ಷಿಗಳ ಪಟ್ಟಿಯೂ ಇದೆ. ಇನ್ನು ಸಿಪಿಐಎಂ ಪಕ್ಷದಿಂದ ಮುನೀರ್ ಕಾಟಿಪಳ್ಳ ಸ್ಪರ್ಧೆ ನಡೆಸಲಿದ್ದು, ಜೆ.ಡಿ.ಎಸ್ ಈ ಭಾಗದಲ್ಲಿ ಯಾವುದೇ ಅಸ್ಥಿತ್ವವನ್ನು ಹೊಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ಮಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
ಕಾಂಗ್ರೆಸ್- ಜೆ.ಆರ್.ಲೋಬೋ
ಬಿಜೆಪಿ- ವೇದವ್ಯಾಸ ಕಾಮತ್ / ಮದನ್/ ಬದ್ರಿನಾಥ್ ಕಾಮತ್
ಜೆಡಿಎಸ್- ಚೆಂಗಪ್ಪ
ಮಂಗಳೂರು ದಕ್ಷಿಣ ಕ್ಷೇತ್ರವೂ ಈ ಬಾರಿಯ ಚುನಾವಣೆಯಲ್ಲಿ ಪೈಪೋಟಿಯ ಕ್ಷೇತ್ರವಾಗಿದೆ. ಹಾಲಿ ಶಾಸಕ ಕಾಂಗ್ರೆಸ್ ನ ಜೆ.ಆರ್ ಲೋಬೋ ಈ ಬಾರಿಯೂ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ. ತಮ್ಮ ಮೌನ ಕಾರ್ಯಶೈಲಿ ಲೋಬೋಗೆ ವರದಾನವಾಗುತ್ತಾ ಅಥವಾ ಮುಳುವಾಗುತ್ತಾ ಎಂಬುದು ರಾಜಕೀಯ ವಲಯದಲ್ಲಿ ಚರ್ಚಾ ವಿಷಯವಾಗಿದೆ.
ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಪಟ್ಟಿ ದೊಡ್ಡದಿದೆ. ವೇದವ್ಯಾಸ್ ಕಾಮತ್, ಬದ್ರಿನಾಥ್ ಕಾಮತ್ ಹೆಸರುಗಳು ಸದ್ಯ ಕೇಳಿಬಂದರೆ ಅದರ ಜೊತೆಗೆ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಸದ್ಯ ರಾಜಕೀಯಕ್ಕೆ ಧುಮುಕಿರುವ ಮದನ್ ಹೆಸರೂ ಕೂಡಾ ಕೇಳಿಬರುತ್ತಿದೆ. ಆದರೆ ಇದ್ಯಾವುದೂ ಅಂತಿಮಗೊಂಡಿಲ್ಲ. ಇನ್ನು ಜೆ.ಡಿ.ಎಸ್ ನಿಂದ ಚೆಂಗಪ್ಪ ಕಣಕ್ಕಿಳಿಯಲಿದ್ದಾರೆ.

ಬಂಟ್ವಾಳದಲ್ಲಿ ಮುಂದುವರಿಯುತ್ತಾ ರೈ ನಾಗಾಲೋಟ?
ಕಾಂಗ್ರೆಸ್- ರಮಾನಾಥ್ ರೈ
ಬಿಜೆಪಿ- ರಾಜೇಶ್ ನಾಯಕ್ ಉಳಿಪಾಡಿಗುತ್ತು
ಜೆಡಿಎಸ್- ಅಸ್ವಿತ್ವ ಇಲ್ಲ
ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪೈಕಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಜಿದ್ದಾ ಜಿದ್ದಿಯ ಕ್ಷೇತ್ರವಾಗಿದೆ. ಹಾಲಿ ಶಾಸಕ ಹಾಗೂ ಸಚಿವರಾದ ರಮನಾಥ್ ರೈ ಹಾಗೂ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನಡುವಿನ ಚುನಾವಣೆಯೆಂದೇ ಇದನ್ನು ಬಿಂಬಿಸಲಾಗುತ್ತಿದೆ.
ಈ ಕ್ಷೇತ್ರದಲ್ಲಿ ರಮನಾಥ್ ರೈ ಅವರು ಆರು ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ನಡೆಸಿದ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಅವರಿಗೆ ವರದಾನವಾಗಲಿದೆ. ಆದರೆ ಇದೇ ಕ್ಷೇತ್ರದಲ್ಲಿ ನಡೆದ ಕೋಮು ಆಧಾರಿತ ಅಹಿತಕರ ಘಟನೆಗಳು ಇವರ ಪಾಲಿಗೆ ಮುಳುವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವ ಹಾಗಿಲ್ಲ.
ಇನ್ನು ಈ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ಕೂಡಾ ಎಲ್ಲಾ ರೀತಿಯ ರಣತಂತ್ರಗಳನ್ನು ಹೂಡುತ್ತಿದೆ. ಈ ನಡುವೆ ಮುಸ್ಲಿಂ ಸಂಘಟನೆ ಪಿಎಫ್ಐಯ ರಾಜಕೀಯ ಪಕ್ಷವಾದ ಎಸ್.ಡಿ.ಪಿ.ಐ ಕೂಡಾ ಚುನಾವಣಾ ಅಖಾಡಕ್ಕಿಳಿಯುವ ಸಾಧ್ಯತೆ ಇದ್ದು ಹೀಗಾದಲ್ಲಿ ಇದರ ನೇರ ಹೊಡೆತ ಕಾಂಗ್ರೆಸಿಗೆ ತಟ್ಟಲಿದೆ. ಮುಸ್ಲಿಂ ಸಮುದಾಯದ ಓಟುಗಳು ಎಸ್.ಡಿ.ಪಿ.ಪಿ ಪಾಲಾದರೆ ಅದು ಬಿಜೆಪಿ ಪಾಲಿಗೆ ಲಾಭ ಎಂಬುವುದರಲ್ಲಿ ಸಂಶಯವಿಲ್ಲ.

ಮೂಡಬಿದಿರೆಯಲ್ಲಿ ಟಿಕೆಟ್ ಗೊಂದಲ
ಕಾಂಗ್ರೆಸ್- ಅಭಯಚಂದ್ರ ಜೈನ್ / ಮಿಥುನ್ ರೈ / ಐವನ್ ಡಿಸೋಜಾ
ಬಿಜೆಪಿ - ಉಮನಾಥ್ ಕೋಟ್ಯಾನ್/ ಜಗದೀಶ್ ಅಧಿಕಾರಿ
ಜೆಡಿಎಸ್ - ಪ್ರಶಾಂತ್ ಶೆಟ್ಟಿ / ಜಯಶ್ರೀ ಅಮರನಾಥ್ ಶೆಟ್ಟಿ
ಮುಲ್ಕಿ ಮೂಡಬಿದಿರೆ ಕ್ಷೇತ್ರವೂ ಈ ಬಾರಿಯ ಚುನಾವಣೆಯಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿರೋ ಕ್ಷೇತ್ರ. ಕಾಂಗ್ರೆಸ್ ನಿಂದ ಹಾಲಿ ಶಾಸಕರಾದ ಅಭಯಚಂದ್ರ ಜೈನ್ ಸ್ಪರ್ಧೆ ನಡೆಸುಯತ್ತಾರೋ ಇಲ್ಲವೋ ಎಂಬುದು ಇನ್ನೂ ಅಂತಿಮವಾಗಿಲ್ಲ. ಇಲ್ಲಿ ಯುವ ನಾಯಕ ಮಿಥುನ್ ರೈ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರ ನಡುವೆ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಸ್ಪರ್ಧೆಗೆ ಒಲವು ತೋರಿದ್ದಾರೆ.
ಮತ್ತೊಂದೆಡೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಫೈಟ್ ಜೋರಾಗಿದ್ದು ಇದು ಯಾವ ರೀತಿ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬುವುದು ಗಮನಿಸಬೇಕಾದ ಸಂಗತಿಯಾಗಿದೆ. ಈ ನಡುವೆ ಜೆ.ಡಿ.ಎಸ್ ಕೂಡಾ ಇಲ್ಲಿ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಬೆಳ್ತಂಗಡಿಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಭಾರೀ ಪೈಪೋಟಿ
ಕಾಂಗ್ರೆಸ್ - ವಸಂತ ಬಂಗೇರಾ
ಬಿಜೆಪಿ - ರಂಜನ್ ಗೌಡ / ಹರೀಶ್ ಪೂಂಜಾ
ಜೆಡಿಎಸ್ - ಅಸ್ತಿತ್ವ ಇಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಕ್ಷೇತ್ರ ಬೆಳ್ತಂಗಡಿ. ಸದ್ಯ ಬೆಳ್ತಂಗಡಿ ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ವಸಂತ ಬಂಗೇರಾ ಈ ಬಾರಿಯೂ ಚುನಾವಣಾ ಕಣದಕ್ಕಿಳಿಯಲಿದ್ದಾರೆ. ತಮ್ಮ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಅವರು ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ.
ಬಿಲ್ಲವ ಸಮುದಾಯದ ಒಲವು ಬಂಗೇರಾ ಕಡೆಗಿದೆ. ಇದು ಅವರಿಗೆ ವರದಾನವಾಗಿ ಮಾರ್ಪಡಲಿದೆ. ಮತ್ತೊಂದೆಡೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ರಂಜನ್ ಗೌಡ ಹಾಗೂ ಹರೀಶ್ ಪೂಂಜಾ ನಡುವೆ ಭಾರೀ ಫೈಟ್ ನಡೆಯುತ್ತಿದೆ. ಇಬ್ಬರೂ ಟಿಕೆಟ್ ಪಡೆದುಕೊಳ್ಳಲು ಒಂದಲ್ಲಾ ಒಂದು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಟಿಕೆಟ್ ಗಾಗಿ ಬೆಜೆಪಿಯಲ್ಲಿರುವ ಗೊಂದಲ ಕಾಂಗ್ರೆಸ್ ಪಾಲಿಗೂ ವರದಾನವಾಗಿ ಮಾರ್ಪಡಲಿದೆ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿದೆ.

ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು?
ಕಾಂಗ್ರೆಸ್ - ಶಕುಂತಳಾ ಶೆಟ್ಟಿ
ಬಿಜೆಪಿ - ಆಶೋಕ್ ರೈ ಕೋಡಿಂಬಾಡಿ / ರವೀಶ್ ತಂತ್ರಿ / ಸಂಜೀವ್ ಮಠಂದೂರು
ಬಿಜೆಪಿಯ ಪ್ರಯೋಗ ಶಾಲೆ ಎಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಸಂಘಟನಾ ಶಕ್ತಿ ಈ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ. ಇಷ್ಟಾದರೂ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಬಿಜೆಪಿಗೆ ಶಾಕ್ ನೀಡಿತ್ತು. ಶಕುಂತಲಾ ಶೆಟ್ಟಿ ಕಾಂಗ್ರೆಸ್ ನಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ಬಿಜೆಪಿ ಪ್ರಯೋಗ ಶಾಲೆಯಲ್ಲೇ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದರು.
ಇನ್ನು ಈ ಬಾರಿಯೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಶಕುಂತಲಾ ಶೆಟ್ಟಿ ಕಣಕ್ಕಿಳಿಯಲಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. ಸದ್ಯ ಅಶೋಕ್ ರೈ ಕೊಂಡಿಂಬಾಡಿ, ರವೀಶ್ ತಂತ್ರಿ ಹಾಗೂ ಸಂಜೀವ್ ಮಠಂದೂರು ಹೆಸರುಗಳು ಕೇಳಿಬರುತ್ತಿದೆ.

ಸುಳ್ಯದಲ್ಲಿ ಅಂಗಾರ ವಿರುದ್ಧ ರಘು ಸ್ಪರ್ಧೆ
ಕಾಂಗ್ರೆಸ್ - ಡಾ.ರಘು
ಬಿಜೆಪಿ - ಅಂಗಾರ.ಎಸ್
ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಕ್ಷೇತ್ರ ಸುಳ್ಯ. ಪರಿಶಿಷ್ಟ ಜಾತಿಗೆ ಮೀಸಲಾದ ಸುಳ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಈ ಬಾರಿಯೂ ನೇರ ಸ್ಪರ್ಧೆ ನಡೆಯಲಿದೆ. ಹಾಲಿ ಶಾಸಕ ಬಿಜೆಪಿಯ ಎಸ್.ಅಂಗಾರ ಈ ಬಾರಿಯೂ ಸ್ಪರ್ಧಿಸಲಿದ್ದಾರೆ.
ಇನ್ನು ಕಾಂಗ್ರೆಸ್ ನಿಂದ ಡಾ. ರಘು ಅಖಾಡಕ್ಕಿಳಿಯಲಿದ್ದಾರೆ. ಕಳೆದ ಬಾರಿ ಅವರು ಕೆಲವೇ ಮತಗಳ ಅಂತರಿಂದ ಸೋಲನ್ನಪ್ಪಿದ್ದರು. ಆದರೆ ಈ ಬಾರಿ ಮತದಾರರು ಅಂಗಾರ ಕೈ ಹಿಡಿಯುತ್ತಾರೆ ಅಥವಾ ಡಾ. ರಘುಗೆ ಜೈ ಅನ್ನುತ್ತಾರೋ ಎಂಬುವುದು ಕುತೂಹಲ ಮೂಡಿಸಿದೆ. ಅಂಗಾರ ಈ ಬಾರಿಯು ಜಯಗಳಿಸಿದರೆ ಅಚ್ಚರಿ ಇಲ್ಲ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !