Breaking:ಇದು ಹಿಂದುತ್ವ ವಿರೋಧಿ ಸರಕಾರ; ಪ್ರಮೋದ್ ಮುತಾಲಿಕ್ ಆಕ್ರೋಶ
ಮಂಗಳೂರು, ಜುಲೈ 29: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧಾಜ್ಞೆ ಹೊರಡಿಸಿರುವ ಬಗ್ಗೆ ಆಕ್ರೋಶ ಹೊರ ಹಾಕಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇದು ಹಿಂದುತ್ವ ವಿರೋಧಿ ಸರಕಾರ ಎಂದಿದ್ದಾರೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ದ.ಕ ಜಿಲ್ಲೆ ಪ್ರವೇಶಿಸದಂತೆ ಹೆಜಮಾಡಿಯಲ್ಲಿ ಪೊಲೀಸರು ತಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ನಗರ ಮ್ಯಾಜಿಸ್ಟ್ರೇಟ್ ಮುತಾಲಿಕ್ ವಿರುದ್ಧ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬದವರನ್ನು ಭೇಟಿಯಾಗಲು ಉಡುಪಿಯಿಂದ ಹೊರಟಿದ್ದ ಅವರನ್ನು ಹೆಜಮಾಡಿಯಲ್ಲಿ ಪೊಲೀಸರು ತಡೆ ಹಿಡಿದಿದ್ದಾರೆ.

ಈ ಬಗ್ಗೆ ಕಿಡಿ ಕಾರಿರುವ ಅವರು ಸರಕಾರವನ್ನು ಟೀಕಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
"ಇವತ್ತು ನಾನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆ ಹಿನ್ನೆಲೆ ಅವರ ತಂದೆ ತಾಯಿ, ಸಹೋದರಿ ಹೆಂಡತಿಗೆ ಸಾಂತ್ವನ ಹೇಳಲು ಉಡುಪಿಯಿಂದ ಹೊರಟೆ. ನನ್ನನ್ನು ಹೆಜಮಾಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಪೊಲೀಸರು ಜಿಲ್ಲಾಧಿಕಾರಿ ನನ್ನನ್ನು ಬ್ಯಾನ್ ಮಾಡಿರುವ ಆದೇಶ ಪತ್ರವನ್ನು ತೋರಿಸಿ ನನ್ನ ತಡೆದಿದ್ದಾರೆ. ಇವರು ತಡೆಯುತ್ತಿರುವುದು ಪ್ರಮೋದ್ ಮುತಾಲಿಕ್ ಅವರನ್ನಲ್ಲ. ಹಿಂದು ನಾಯಕನನ್ನು, ಹಿಂದುತ್ವವನ್ನು ತಡೆಯುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ತೋರಸುತ್ತಿದ್ದಾರೆ' ಎಂದರು.
"ಕಾಂಗ್ರೆಸ್ ಸರಕಾರ ನನ್ನನ್ನು ತಡೆದಿದ್ದರೇ ಒಪ್ಪಬಹುದಿತ್ತು. ಕಾಂಗ್ರೆಸ್ ಹಿಂದೂ ವಿರೋಧಿ. ಮುಸ್ಲಿಂ ಓಲೈಕೆಯಲ್ಲಿ ಬಂದಂತಹ ಕಾಂಗ್ರೆಸ್ ನನ್ನನ್ನು ಹಲವು ಜಿಲ್ಲೆಗಳಲ್ಲಿ ಹಲವು ಬಾರಿ ಬ್ಯಾನ್ ಮಾಡಿದೆ. ಅದರ ವಿರುದ್ಧ ನಾನು ಪ್ರತಿಭಟಿಸಿದ್ದೇನೆ. ಅವರನ್ನು ಒಪ್ಪುತ್ತೇನೆ. ಆದರೆ, ಹಿಂದೂತ್ವದ ಆಧಾರದ ಮೇಲೆ, ಹಿಂದೂಗಳ ಮತಗಳ ಆಧಾರದಲ್ಲಿ ಬಂದಂತ ನೀವು ಹಿಂದು ನಾಯಕನನ್ನು , ಹಿಂದುತ್ವ ವಿರೋಧಿಯಾಗಿ ನನ್ನನ್ನು ತಡೆದಿದ್ದಿರಿ. ನಿಮ್ಮದೆ ಪಕ್ಷದ ಕಾರ್ಯಕರ್ತರೇ ಸಾವಿರಾರು ಸಂಖ್ಯೆಯಲ್ಲಿ ರಾಜೀನಾಮೆ ಕೊಟ್ಟು ನಿಮ್ಮನ್ನು ಉಗಿಯುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದರು.

ಪ್ರವೀಣ್ ನೆಟ್ಟಾರು ಅವರ ಕುಟುಂಬವನ್ನು ಭೇಟಿಯಾಗಲು ಬಯಸಿದ್ದ ಪ್ರಮೋದ್ ಮುತಾಲಿಕ್ ಅವರನ್ನು ನಗರದ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಪರಿಗಣಿಸಿ ಅವರ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವೇಶ ನಿರಾಕರಣೆ ಹಿನ್ನೆಲೆ ಪ್ರಮೋದ್ ಮುತಾಲಿಕ್ ಮತ್ತು ಅವರ ಶ್ರೀರಾಮ ಸೇನೆ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.












Click it and Unblock the Notifications