ಮಂಗಳೂರು; ಲಾಕ್‌ಡೌನ್ ನಡುವೆ ಹುಕ್ಕಾ ಬಾರ್ ಓಪನ್
ಮಂಗಳೂರು, ಜುಲೈ 01; ಕರ್ನಾಟಕ ಸರ್ಕಾರ ಲಾಕ್‌ಡೌನ್ ನಿಯಮಗಳನ್ನು ಸಂಪೂರ್ಣವಾಗಿ ಸಡಿಲಿಸಿಲ್ಲ. ಕೆಲವು ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ. ಲಾಕ್‌ಡೌನ್ ನಡುವೆ ಕಡಲನಗರಿ ಮಂಗಳೂರಿನಲ್ಲಿ ಹುಕ್ಕಾ ಬಾರ್‌ವೊಂದು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿತ್ತು.
ಹುಕ್ಕಾಬಾರ್ ಬಾಗಿಲು ತೆರೆದ ಬಗ್ಗೆ ಖಚಿತ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ ಬಾರ್ ಮಾಲೀಕ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ 17 ಜನರು ಹುಕ್ಕಾ ಸೇವಿಸುತ್ತಿದ್ದರು.
ನಗರದ ಕಂಕನಾಡಿಯಲ್ಲಿ ಈ ಕ್ಲೌಡ್ ಶೀಷಾ ಹೆಸರಿನ ಹುಕ್ಕಾ ಕೆಫೆಯ ಎದುರು ಭಾಗದಲ್ಲಿ ಶಟರ್ ಎಳೆಯಲಾಗಿತ್ತು. ಹಿಂಬಾಗಿಲಿನ ಮೂಲಕ ಗ್ರಾಹಕರನ್ನು ಒಳಗೆ ಕರೆಸಿಕೊಂಡು ಹುಕ್ಕಾ ನೀಡಲಾಗುತ್ತಿತ್ತು. ಪೊಲೀಸರು ದಾಳಿ ನಡೆಸಿ ಎಲ್ಲರನ್ನೂ ವಶಕ್ಕೆ ಪಡೆದು ಎಲ್ಲರ ಡ್ರಗ್ ಪರೀಕ್ಷೆ ಮಾಡಲಾಗಿದೆ.

ಪೊಲೀಸರು ದಾಳಿ ಸಂದರ್ಭದಲ್ಲಿ ಹುಕ್ಕಾ ಸೇವನೆಗೆ ಬಳಸುತ್ತಿದ್ದ ಹುಕ್ಕಾ ಪಾಟ್ಸ್, ತಂಬಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಲಾಕ್‌ಡೌನ್ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಹಾಗೂ ಕೊಟ್ಪಾ ಕಾಯ್ದೆಯಡಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ದಾಳಿ ವೇಳೆ ಈ ಹುಕ್ಕಾ ಕೆಫೆಯ ವಾಣಿಜ್ಯ ಪರವಾನಿಗೆ ಅವಧಿ ಮುಗಿದಿರುವುದು ಸಹ ಪತ್ತೆಯಾಗಿದೆ. ಹೀಗಾಗಿ ಮುಂದೆ ಲೈಸೆನ್ಸ್ ನವೀಕರಣ ಮಾಡದೇ, ಲೈಸನ್ಸ್ ರದ್ದುಗೊಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯುವುದಕ್ಕೂ ಪೊಲೀಸರು ನಿರ್ಧರಿಸಿದ್ದಾರೆ.












Click it and Unblock the Notifications