ಪಿಎಫ್‌ಐ ಕಾರ್ಯಕರಿಗೆ ಸಿರಿಯಾ, ಪಾಕ್‌ನಲ್ಲಿ ತರಬೇತಿ: ಶೋಭಾ ಕರಂದ್ಲಾಜೆ ಆರೋಪ
ಮಂಗಳೂರು, ಜುಲೈ 31: "ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಕೇರಳ ಮಾದರಿಯಲ್ಲಿ ನಡೆದಿದೆ. ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಇದೇ ರೀತಿಯ ಕೊಲೆಗಳನ್ನು ಕೇರಳದಲ್ಲಿ ಸಾಕಷ್ಟು ಮಾಡಿದ್ದಾರೆ. ಸಿರಿಯಾ, ಪಾಕಿಸ್ತಾನದಲ್ಲಿ ತರಬೇತಿ ಪಡೆದು ಭಾರತದಲ್ಲಿ ಈ ಕೃತ್ಯವನ್ನು ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ" ಅಂತಾ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶೋಭಾ ಕರಂದ್ಲಾಜೆ ಬೆಳ್ಳಾರೆಯ ಬಿಜೆಪಿ ಪ್ರವೀಣ್ ನೆಟ್ಟಾರ್ ಮನೆಗೆ ಭಾನುವಾರ ಭೇಟಿ ನೀಡಿದ್ದರು. ಮನೆಯವರಿಗೆ ಸಾಂತ್ವನ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕುತ್ತಿಗೆಯಿಂದ ಮೇಲ್ಬಾಗದಲ್ಲಿ ತಲೆಗೆ ಹೊಡೆದು ಕೊಲೆ ಮಾಡಲಾಗುತ್ತಿದೆ. ಬೆಂಗಳೂರಿನ ರುದ್ರೇಶ್, ಮಂಗಳೂರಿನ ಶರತ್ ಮಡಿವಾಳ ಸೇರಿದಂತೆ ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಇದೇ ರೀತಿಯಲ್ಲಿ ಆಗಿದೆ" ಎಂದರು.
"ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಈ ವಿಚಾರವನ್ನು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಗಮನಕ್ಕೆ ತರಲಾಗಿದೆ. ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೆ ಒಪ್ಪಿಸಲಾಗಿದೆ. ಶೀಘ್ರವೇ ತನಿಖಾ ತಂಡ ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಿದೆ" ಎಂದರು. ಕೇಂದ್ರ ಸಚಿವೆ ಶೋಭಾ ವೈಯುಕ್ತಿಕವಾಗಿ ತಮ್ಮ ಒಂದು ತಿಂಗಳ ಸಂಬಳವನ್ನು ಪ್ರವೀಣ್ ಕುಟುಂಬಸ್ಥರಿಗೆ ನೀಡಿದ್ದಾರೆ.

ಇನ್ನು ಪ್ರವೀಣ್ ಕೊಲೆಗೆ ಕೇರಳ ಲಿಂಕ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕೇರಳ ಗಡಿಭಾಗದಲ್ಲಿ ಪೊಲೀಸರ ತಪಾಸಣೆ ಹೆಚ್ಚಿದೆ. ಜಿಲ್ಲೆಯ ಗಡಿ ಭಾಗವಾದ ತಲಪಾಡಿ, ಉಳ್ಳಾಲ, ವಿಟ್ಲ, ಈಶ್ಚರಮಂಗಲ, ಸುಳ್ಯ, ಪಾಣಾಜೆ ಗಡಿಭಾಗದಲ್ಲಿ ಪೊಲೀಸರ ತಪಾಸಣೆ ಹೆಚ್ಚು ಮಾಡಲಾಗಿದೆ.
ಪ್ರತಿ ವಾಹನ ಸವಾರರನ್ನು ತಡೆದು ಪರಿಶೀಲಿಸಿ ದಕ್ಷಿಣ ಕನ್ನೆ ಗಡಿಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಗಡಿಭಾಗದಲ್ಲಿ ಭದ್ರತೆ ಹೆಚ್ಚಿಸಿ, ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಇನ್ನು ರಾಜ್ಯ ಸರ್ಕಾರದ ಸೂಚನೆಯಂತೇ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸಲಾಗಿದೆ. ಸೋಮವಾರ ಎನ್ಐಎ ಅಧಿಕಾರಿಗಳು ಬೆಳ್ಳಾರೆಗೆ ಆಗಮಿಸುವ ಸಾಧ್ಯತೆಗಳಿವೆ.
ಸಿಮಿ ಸಂಘಟನೆಯ ಬಗ್ಗೆ ದೊಡ್ಡ ಪ್ರಮಾಣದ ಮಾಹಿತಿ ಕಲೆ ಹಾಕಿದ ಮೇಲೆ ಅದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿತ್ತು. ಈಗ ಪಿಎಫ್ಐ ನಿಷೇಧಿಸಬೇಕಾದರೆ ಅದಕ್ಕೆ ಬೇಕಾಗ ಮಾಹಿತಿಗಳನ್ನು ಕಾನೂನಿನ ಪ್ರಕಾರ ಕಲೆಯಾಕಬೇಕು. ಇದಕ್ಕಾಗಿಯೇ ಹರ್ಷನ ಕೊಲೆಯ ಪಕ್ಷರಣವನ್ನು ಎನ್‌ಐಎಗೆ ನೀಡಲಾಗಿತ್ತು. ಸರಿಯಾದ ರೀತಿಯಲ್ಲಿ ಮಾಹಿತಿ ಸಂಗ್ರಹ ಮಾಡುವಲ್ಲಿ ಸರಕಾರ ತೊಡಗಿಕೊಂಡಿದೆ. ನಂತರ ಈ ಸಂಘಟನೆಯನ್ನು ಬ್ಯಾನ್ ಮಾಡಬೇಕು. ಅಲ್ಲದೆ ನಿಷೇಧಿಸದ ನಂತರ ಕೋರ್ಟ್‌ನಲ್ಲಿ ಗೆಲ್ಲುವಂತಿರಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಗೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳು 5 ದಿನಗಳ ಪೊಲೀಸ್ ಕಸ್ಟಡಿಗೆ; ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಬ್ಬರನ್ನು ಪುತ್ತೂರು ನ್ಯಾಯಾಲಯ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರವೀಣ್ ಕೊಲೆಗೆ ಸಹಕಾರ ನೀಡಿದ ಆರೋಪದಲ್ಲಿ ಸವಣೂರಿನ ಮುಹಮ್ಮದ್ ಜಾಕೀರ್ ಮತ್ತು ಬೆಳ್ಳಾರೆಯ ಶಫೀಕ್ ಎಂಬುವವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದರು.ಇದೀಗ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ಮಧ್ಯೆ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಗೌಡ ಆರ್. ಪಿ ಅವರು ಆದೇಶ ನೀಡಿದ್ದರು.
ಪ್ರಕರಣದ ಕುರಿತು ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಿಸಬೇಕಾಗಿರುವುದರಿಂದ ತನ್ನ ಕಸ್ಟಡಿಗೆ ಒಪ್ಪಿಸುವಂತೆ ಬೆಳ್ಳಾರೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಇಬ್ಬರು ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.












Click it and Unblock the Notifications