Konkan Railway: ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ವಿಲೀನಕ್ಕೆ ಹೆಚ್ಚಿದ ಒತ್ತಡ
ಮಂಗಳೂರು, ಮಾರ್ಚ್ . 26: ಕರಾವಳಿ ಪ್ರದೇಶದ ಒಟ್ಟಾರೆ ರೈಲ್ವೆ ಅಭಿವೃದ್ಧಿಗಾಗಿ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಅನ್ನು ವಿಲೀನಗೊಳಿಸಬೇಕು ಎಂಬ ಬೇಡಿಕೆ ಕೇಳಿ ಬಂದಿದೆ.
ಮುಂಬರುವ ಲೋಕಸಭಾ ಚುನಾವಣೆಯ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಅನ್ನು ವಿಲೀನಗೊಳಿಸುವ ಭರವಸೆ ನೀಡಬೇಕೆಂದು ಕರಾವಳಿ ಕರ್ನಾಟಕದ ಪ್ರಯಾಣಿಕರ ಸಂಘಗಳು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿವೆ.

ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹ ಭರವಸೆಯನ್ನು ನೀಡಬೇಕೆಂದು ಕುಂದಾಪುರ ರೈಲ್ವೆ ಪ್ರಯಾಣಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಭಾರತದಾದ್ಯಂತ ರೈಲ್ವೆ ಮೂಲಸೌಕರ್ಯವು ಬೃಹತ್ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಹಣಕಾಸಿನ ನಿರ್ಬಂಧಗಳ ಕಾರಣದಿಂದಾಗಿ ಮೂಲಭೂತ ಸೌಕರ್ಯಗಳನ್ನು ನವೀಕರಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ರೈಲ್ವೆ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮವು ಲೈನ್ ಡಬ್ಲಿಂಗ್, ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಶ್ಚಿಮ ಕರಾವಳಿಯಾದ್ಯಂತ ಆರ್ಥಿಕ ಬೆಳವಣಿಗೆಯನ್ನು ತೀವ್ರವಾಗಿ ಕುಂಠಿತಗೊಳಿಸಿದೆ ಎಂದು ಗಣೇಶ್ ಪುತ್ರನ್ ಹೇಳಿದ್ದಾರೆ.

ಪಡೀಲ್ ಬೈಪಾಸ್ ಮೂಲಕ ಬೆಂಗಳೂರು ಮತ್ತು ಕುಂದಾಪುರ ನಡುವೆ ಹೊಸ ರೈಲು ಪರಿಚಯಿಸುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು. ಉಡುಪಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವನ್ನು ಹೊಂದುವ ಬಗ್ಗೆ ಅಭ್ಯರ್ಥಿಗಳು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಬೇಕು ಎಂದು ಗಣೇಶ್ ಪುತ್ರನ್ ಒತ್ತಡ ಹಾಕಿದ್ದಾರೆ.
ಪಶ್ಚಿಮ ಮುಂಬೈಗೆ ನೇರ ರೈಲು
ಇನ್ನು, ಪನ್ವೇಲ್ ಮತ್ತು ವಸಾಯಿ ರಸ್ತೆ ಮೂಲಕ ಪಶ್ಚಿಮ ಮುಂಬೈನ ಮಂಗಳೂರು ಮತ್ತು ಬಾಂದ್ರಾ ನಡುವೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ನೀಡವ ಬಗ್ಗೆ ಭರವಸೆಯನ್ನು ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಹಾಕಿಸಬೇಕು ಎಂದು ಮುಂಬೈ ರೈಲು ಯಾತ್ರಿ ಸಂಘದ ಒಲಿವರ್ ಡಿಸೋಜಾ ಒತ್ತಾಯಿಸಿದ್ದಾರೆ.
ಮಂಗಳೂರು ಮತ್ತು ಮುಂಬೈ ನಡುವೆ ಹಲವು ರೈಲುಗಳು ಕಾರ್ಯನಿರ್ವಹಿಸುತ್ತಿದ್ದರೂ ಯಾವುದೂ ಪಶ್ಚಿಮ ಮುಂಬೈಗೆ ಸಂಪರ್ಕ ಕಲ್ಪಿಸುತ್ತಿಲ್ಲ. ಕೊಂಕಣ ರೈಲ್ವೇ ಕಾರ್ಪೊರೇಷನ್ ಅನ್ನು ಭಾರತೀಯ ರೈಲ್ವೇ ಯೊಂದಿಗೆ ವಿಲೀನ ಮಾಡುವ ಜೊತೆಗೆ ಈ ಬಗ್ಗೆಯೂ ರಾಜಕೀಯ ಪಕ್ಷಗಳು ಮಾತನಾಡಬೇಕು. ಕೆಆರ್‌ಸಿಎಲ್ ಹೆಚ್ಚುವರಿ ದರವನ್ನು ಸಂಗ್ರಹಿಸುತ್ತಿದೆ, ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒಲಿವರ್ ಡಿಸೋಜಾ ಮನವಿ ಮಾಡಿದ್ದಾರೆ.












Click it and Unblock the Notifications