ಪಡೀಲ್-ಕುಲಶೇಖರ ಜೋಡಿ ಹಳಿ ಮುಕ್ತ, ಸುರಂಗದ ಮೂಲಕ ರೈಲು ಸಂಚಾರ
ಮಂಗಳೂರು, ಮಾರ್ಚ್ 22; ದಕ್ಷಿಣ ಕನ್ನಡ ಪಡೀಲ್ ಮತ್ತು ಕುಲಶೇಖರ ನಡುವಿನ ಜೋಡಿ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 4ನೇ ಸುರಂಗದ ಕಾಮಗಾರಿಯೂ ಪೂರ್ಣಗೊಂಡು ಸೋಮವಾರ ಮೊದಲ ರೈಲು ಜೋಡಿ ಹಳಿಯಲ್ಲಿ ಸುರಂಗದ ಮೂಲಕ ಸಂಚಾರ ನಡೆಸಿದೆ.
ರೈಲು ನಂಬರ್ 12618 ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲು ಮೊದಲ ಬಾರಿಗೆ ಜೋಡಿಹಳಿಯಲ್ಲಿ ಸೋಮವಾರ ಸಂಚಾರ ನಡೆಸಿತು. ರೈಲು ನಂಬರ್ 12617 ರೈಲು ಸಹ ಇದೇ ಮಾರ್ಗದಲ್ಲಿ ಸಂಚಾರ ನಡೆಸಿತು.
ಪಡೀಲ್ ಮತ್ತು ಕುಲಶೇಖರ ನಡುವಿನ 2.26 ಕಿ. ಮೀ. ಉದ್ದದ ಜೋಡಿ ಹಳಿ ಮಾರ್ಗದಲ್ಲಿ 780 ಮೀಟರ್ ಸುರಂಗವೂ ಒಳಗೊಂಡಿತ್ತು. ಇದು ಮಂಗಳೂರು ಜಂಕ್ಷನ್-ಪಣಂಬೂರು ಮಾರ್ಗದ 19 ಕಿ. ಮೀ. ಜೋಡಿ ಹಳಿಯ 4ನೇ ಮತ್ತು ಕೊನೆಯ ಸುರಂಗವಾಗಿತ್ತು.

ಈ ಜೋಡಿ ಹಳಿ ಕಾಮಗಾರಿ, ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿರುವುದರಿಂದ ಮಂಗಳೂರು ಜಂಕ್ಷನ್-ಜೋಕಟ್ಟೆ-ಪಣಂಬೂರು ನಡುವಿನ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ. ಈ ಮಾರ್ಗ ಸಂಚಾರಕ್ಕೆ ಮುಕ್ತಗೊಳಿಸಲು ಮಾರ್ಚ್ 17ರಿಂದ 28 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಪಡೀಲ್-ಕುಲಶೇಖರ ನಿಲ್ದಾಣಗಳ ನಡುವಿನ ಜೋಡಿ ಹಳಿ ಕಾಮಗಾರಿಯ ಅಂತಿಮ ಹಂತದ ಕೆಲಸಗಳನ್ನು ಮಾಡಲು ಮಾರ್ಚ್ 17ರಿಂದ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಈಗ ಹೊಸ ಮಾರ್ಗದಲ್ಲಿ ಸಂಚಾರ ಆರಂಭಗೊಂಡಿರುವುದರಿಂದ ಕುಲಶೇಖರದಲ್ಲಿದ್ದ ತಾತ್ಕಾಲಿಕ ನಿರ್ವಹಣಾ ನಿಲ್ದಾಣ ರದ್ದುಗೊಳಿಸಲಾಗಿದೆ.
70 ಕೋಟಿ ರೂ. ವೆಚ್ಚ; ಕುಲಶೇಖರ-ಪಡೀಲ್ ನಡುವಿನ 780 ಮೀಟರ್ ಉದ್ದದ ಸುರಂಗವನ್ನು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪಣಂಬೂರು-ಕುಲಶೇಖರ ನಡುವಿನ 2.26 ಕಿ. ಮೀ. ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದ ಕಾರಣ ರೈಲುಗಳು ಕ್ಲಿಯರೆನ್ಸ್ ಪಡೆಯಲು ಕಾಯಬೇಕಾಗಿತ್ತು. ಇದರಿಂದಾಗಿ ರೈಲು ಸಂಚಾರ ವಿಳಂಬವಾಗುತ್ತಿತ್ತು.
ಈ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳು ಜೋಕಟ್ಟೆ ಅಥವ ಮಂಗಳೂರು ಜಂಕ್ಷನ್‌ನಲ್ಲಿ ಕಾಯಬೇಕಿತ್ತು. ಒಂದು ರೈಲು ಸಂಚಾರ ನಡೆಸಿದ ಬಳಿಕ ಮತ್ತೊಂದು ರೈಲು ಸಂಚರಿಸಬೇಕಿತ್ತು. ಸರಕು ಸಾಗಣೆ ರೈಲುಗಳು ಗಂಟೆಗಟ್ಟಲೇ ಕಾಯುತ್ತಿದ್ದವು. ಈಗ ರೈಲುಗಳ ಸಂಚಾರ ಸುಗಮವಾಗಿದೆ.
780 ಮೀಟರ್‌ನ 4ನೇ ಸುರಂಗ ಈ ಮಾರ್ಗದ ಪ್ರಮುಖ ಕಾಮಗಾರಿಯಾಗಿತ್ತು. ಇದು ಪಾಲಕ್ಕಾಡ್ ರೈಲ್ವೆ ವಿಭಾಗದ 4ನೇ ಸುರಂಗವಾಗಿದೆ. 6.8 ಮೀಟರ್ ಎತ್ತರದ ಸುರಂಗ ಮಾರ್ಗದ ಕಾಮಗಾರಿ ಈಗ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಿದೆ.











Click it and Unblock the Notifications