'ರಾಜ್ಯ ಸರಕಾರದ ವಿರುದ್ಧ ಟೀಕಿಸಲು ಪ್ರತಿಪಕ್ಷಕ್ಕೆ ಯಾವುದೇ ವಿಷಯ ಸಿಗುತ್ತಿಲ್ಲ'
ಮಂಗಳೂರು, ಸೆಪ್ಟೆಂಬರ್ 18 : ರಾಜ್ಯ ಸರಕಾರದ ವಿರುದ್ಧ ಟೀಕಿಸಲು ಪ್ರತಿಪಕ್ಷಗಳಿಗೆ ಯಾವುದೇ ವಿಷಯ ಸಿಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಗಲಭೆಗೆ ಸಂಚು ಹೂಡವುದು ಬಿಜೆಪಿಗರ ಜಾಯಾಮಾನ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ .ಖಾದರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಾಮರಾಜನಗರದದಲ್ಲಿ ದೇವಸ್ಥಾನವೊಂದರ ಭಗವಾಧ್ವಜಕ್ಕೆ ಬೆಂಕಿ ಹಚ್ಚಿ ಮತೀಯ ಗಲಭೆ ಸೃಷ್ಟಿಸಲು ನಡೆಸಿದ ಸಂಚಿನಲ್ಲಿ ಬಿಜೆಪಿಗರು ಭಾಗಿಯಾಗಿದ್ದಾರೆ. ಬಿಜೆಪಿಗರಿಗೆ ಚುನಾವಣೆಗೆ ಹೋಗಲು ವಿಷಯವೇ ಇಲ್ಲ. ಹಾಗಾಗಿ ಇಂತಹ ಸಂಚು ನಡೆಸುತ್ತಿದೆ. ಆದರೆ, ರಾಜ್ಯದ ಜನತೆ ಇದಕ್ಕೆ ಮನ್ನಣೆ ನೀಡುತ್ತಿಲ್ಲ" ಎಂದರು.

ಪ್ರತಿಪಕ್ಷ ಬಿಜೆಪಿಗೆ ಸರಕಾರದ ವಿರುದ್ಧ ಆರೋಪಿಸಲು ವಿಷಯಗಳೇ ಇಲ್ಲ. ಸಚಿವ ಕೆ.ಜೆ.ಜಾರ್ಜ್‌ರ ರಾಜೀನಾಮೆ ಕೇಳಿ ನಗೆಪಾಟಲಿಗೀಡಾಗುತ್ತಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಚಿವ ಕೆ.ಜೆ.ಜಾರ್ಜ್‌ರನ್ನು ಆರೋಪಿ ಎಂದು ಗುರುತಿಸಿಲ್ಲ.
ಸಿಬಿಐ ತನಿಖೆ ನಡೆಸಿ 3 ತಿಂಗಳೊಳಗೆ ವರದಿ ಸಲ್ಲಿಸಲು ಆದೇಶಿಸಿದೆ. ಬಿಜೆಪಿಗರಿಗೆ ಸಿಬಿಐ ಮೇಲೆ ವಿಶ್ವಾಸವಿರುವಾಗ 3 ತಿಂಗಳು ಕಾಯ್ದು. ಮುಂದೇನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದರು.
ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications