ಮಂಗಳೂರು: ಧಾರ್ಮಿಕ ಕ್ಷೇತ್ರಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಬೈಬಲ್ ವಾಕ್ಯ ಹಾಕಿದ್ದ ವೃದ್ಧ ಬಂಧನ
ಮಂಗಳೂರು, ಡಿಸೆಂಬರ್ 29: ಮಂಗಳೂರಿನ ಮಾರ್ನೆಮಿ ಕಟ್ಟೆಯಲ್ಲಿರುವ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ವ್ಯಕ್ತಿಯನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ, ಆರೋಪಿ ವೃದ್ಧ ಶಾಕ್ ನೀಡಿದ್ದಾನೆ.
ಆರೋಪಿ ವೃದ್ಧನ ವಿಚಾರಣೆ ವೇಳೆ, ಈತ ಮಂಗಳೂರಿನ 18 ಕಡೆಯ ದೇವಸ್ಥಾನ, ದೈವಸ್ಥಾನಗಳಿಗೆ ಈ ರೀತಿಯಾಗಿ ಬಳಸಿದ ಕಾಂಡೋಮ್ ಹಾಕಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಭೂಮಿಗೆ ಅಂತ್ಯ ಬರುವ ನಂಬಿಕೆಯಿಂದ, ದೈವಸ್ಥಾನಗಳ ಹುಂಡಿಗೆ ಬೈಬಲ್ ವಾಕ್ಯ ಮತ್ತು ಬಳಸಿದ ಕಾಂಡೋಮ್ ಹಾಕಿ ಗಲಭೆಗೆ ಪ್ರಯತ್ನಿಸಿದ್ದರ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ಮಾರ್ನೆಮಿ ಕಟ್ಟೆಯಲ್ಲಿರುವ ಕೊರಗಜ್ಜ ದೈವಸ್ಥಾನದ ಹುಂಡಿಗೆ ಕಾಂಡೋಮ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಟಿವಿ ಆಧಾರದಲ್ಲಿ ಮಂಗಳೂರು ಪೊಲೀಸರು 62ರ ಹರೆಯರ ವೃದ್ಧ ದೇವದಾಸ್ ದೇಸಾಯಿ ಎಂಬಾತನನ್ನು ಬಂಧಿಸಿದ್ದಾರೆ.

ಮೂಲತಃ ಹುಬ್ಬಳಿಯವನಾದ ಈತನ ಕುಟುಂಬ ಕಲಹದಿಂದ ಸದ್ಯ ಮಂಗಳೂರು ನಗರ ಹೊರವಲಯದ ಕೋಟೆಕಾರುವಿನ ಕೊಂಡಾಣ ಎಂಬಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ.
ಮೂಲತಃ ಹುಬ್ಬಳ್ಳಿಯ ಮೂಲದವನಾದ ದೇವದಾಸ್ ದೇಸಾಯಿ, ಕುಟುಂಬ ಕಲಹದಿಂದ ಕಳೆದ 22 ವರ್ಷಗಳಿಂದ ಮಂಗಳೂರಿನಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾನೆ. ಹಲವು ವರ್ಷಗಳ ಕಾಲ ಆಟೋ ರಿಕ್ಷಾ, ಲಾರಿ, ಕಾರು ಚಾಲಕನಾಗಿ ಕೆಲಸ ಮಾಡಿದ್ದ ದೇವದಾಸ್ ದೇಸಾಯಿ, ಸದ್ಯ ಗುಜರಿ ಪೇಪರ್ ಬಾಕ್ಸ್‌ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಾನೆ.
ಕಳೆದ ಹಲವು ತಿಂಗಳುಗಳಿಂದ ಮಂಗಳೂರಿನ ವಿವಿಧ ದೇವಸ್ಥಾನ, ದೈವಸ್ಥಾನಗಳ ಕಾಣಿಕೆ ಹುಂಡಿಗಳಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರು ತನಿಖೆ ನಡೆಸಿದರೂ ಕಾಂಡೋಮ್ ಹಾಕಿದ ವ್ಯಕ್ತಿ ಯಾರೆಂಬುವುದು ತಿಳಿದುಬಂದಿರಲಿಲ್ಲ.

ಆದರೆ ಕಳೆದರೆಡು ದಿನಗಳ ಹಿಂದೆ ಮಂಗಳೂರಿನ ಮಾರ್ನೆಮಿ ಕಟ್ಟೆಯಲ್ಲಿರುವ ಕೊರಗಜ್ಜ ದೈವದ ಕಾಣಿಕೆ ಹುಂಡಿಯಲ್ಲೂ ಕಾಂಡೋಮ್ ಪತ್ತೆಯಾಗಿದ್ದು, ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ತಡರಾತ್ರಿ ದೇವದಾಸ್ ದೇಸಾಯಿ ಕಾಣಿಕೆ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ.
ಆರೋಪಿ ದೇವದಾಸ್ ದೇಸಾಯಿಯನ್ನು ವಿಚಾರಣೆಗೊಳಪಡಿಸಿದಾಗ ಸುಮಾರು 18 ಕಡೆಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿರುವುದು ಗೊತ್ತಾಗಿದೆ.
ಮಂಗಳೂರಿನ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್‌ನ ಬಳಿ ಕಾಣಿಕೆ ಡಬ್ಬಿ, ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್ ಬಳಿ, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಫು ನಾಗನಕಟ್ಟೆಯಲ್ಲಿ ಅಪಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ, ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ, ನಂದಿಗುಡ್ಡೆಯ ಕೊರಗಜ್ಜನ ಗುಡಿ, ಎ.ಬಿ. ಶೆಟ್ಟಿ ವೃತ್ತದ ಬಳಿಯ ದರ್ಗಾ, ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು, ಕೋಟ ಶ್ರೀ ಬಬ್ಬುಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್ ಮತ್ತು ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪುವಿನಲ್ಲಿ ಈ ಅಪಚಾರ ಎಸಗಿರುವ ಬಗ್ಗೆ ಆರೋಪಿ ದೇವದಾಸ್ ಒಪ್ಪಿಕೊಂಡಿದ್ದಾನೆ.
'ಭೂಮಿಗೆ ಅಂತ್ಯ ಬರುವ ಮೊದಲು ಲೋಕದ ಎಲ್ಲಾ ದೇಶಗಳ ಸ್ತ್ರೀ- ಪುರುಷರಿಗೆ ಏಸು ಕ್ರಿಸ್ತ ರಕ್ಷಣೆ ಕೊಡುತ್ತಾನೆ' ಎಂಬ ಬೈಬಲ್‌ನ ವಾಕ್ಯದ ಜೆರಾಕ್ಸ್ ಮಾಡಿ ದೇವಸ್ಥಾನ ಮತ್ತು ಮಸೀದಿಯ ಹುಂಡಿಗಳಿಗೆ ಹಾಕುತ್ತಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಆರೋಪಿಯ ಹುಚ್ಚು ತಿಳುವಳಿಕೆಯ ಕಾರಣದಿಂದ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಲಾಗಿದೆ.












Click it and Unblock the Notifications