'ಮಂಗಳೂರು ಚಲೋ' ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಶೋಭಾ
ಮಂಗಳೂರು, ಸೆಪ್ಟೆಂಬರ್ 6: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯ ಪ್ರತಿಭಟನಾ ಜಾಥಾವನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಎಂದು ಹೇಳಿದ ಅವರು, "ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಭಾಗಿಯಾಗಿರುವ ಪಿಎಫ್ಐ, ಎಸ್.ಡಿ.ಪಿ.ಐ ಯನ್ನು ನಿಷೇಧಿಸಬೇಕು," ಎಂದು ಅವರು ಒತ್ತಾಯಿಸಿದರು .

ಸಚಿವ ರಮಾನಾಥ್ ರೈ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ ಕರಂದ್ಲಾಜೆ, "ಮಂಗಳೂರಿನಲ್ಲಿ ನಾಳೆ ಆಯೋಜಿಸಲಾಗಿರುವ ಪ್ರತಿಭಟನಾ ಸಭೆಯನ್ನು ಪೊಲೀಸರ ಮೂಲಕ ತಡೆಯೊಡ್ಡಲು ಪ್ರಯತ್ನಿಸಲಾಗುತ್ತಿದೆ," ಎಂದು ಅವರು ದೂರಿದರು.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸೂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .ಕೆಂಪಯ್ಯ ಅವರ ಮೂಲಕ ಸಿದ್ದರಾಮಯ್ಯ ಅವರು ಪೊಲೀಸರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು .
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಎಸಿಬಿ ಹಾಗೂ ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದ ಅವರು, ಸಿಬಿಐ ತನಿಖೆಯಿಂದ ರಾಜ್ಯ ಸರ್ಕಾರದ ಕೈವಾಡ ಹೊರಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದರು.












Click it and Unblock the Notifications