ಪ್ರವೀಣ್ ನೆಟ್ಟಾರ್ ಹತ್ಯೆ: ಎಫ್‌ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ ಎನ್ಐಎ
ಮಂಗಳೂರು, ಆಗಸ್ಟ್ 17: ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಠಿಸಿದ್ದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಈಗಾಗಲೇ ಹಲವು ಮಜಲುಗಳಲ್ಲಿ ತನಿಖೆ ಆರಂಭಿಸಿದೆ.
ಪೊಲೀಸರಿಂದ ಅಧಿಕೃತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ಬಾಡಿ ವಾರಂಟ್ ಮೂಲಕ ಪ್ರಕರಣದ ಪ್ರಮುಖ ಆರೋಪಿಗಳನ್ನು ಎನ್ಐಎ ವಶಕ್ಕೆ ಪಡೆಯಲಿದೆ. ಈಗಾಗಲೇ ಪ್ರಕರಣದ ತನಿಖೆ ನಡೆಸಿದ ಜಿಲ್ಲಾ ಪೊಲೀಸರ ವಿಶೇಷ ತಂಡದಿಂದ ದಾಖಲೆಗಳನ್ನು ಪಡೆದು ಕೊಂಡಿರುವ ಎನ್‌ಐಎ ಅಧಿಕಾರಿಗಳು, ಈವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳನ್ನು ವಿಚಾರಣೆ ಮಾಡಿದ್ದರು.
Breaking:ಪ್ರವೀಣ್ ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳ ಬಂಧನ
ಕಸ್ಟಡಿಯಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಸಂದರ್ಭ ಹಲವಾರು ಸ್ಪೋಟಕ ಮಾಹಿತಿಗಳನ್ನು ಪೊಲೀಸ್ ಅಧಿಕಾರಿಗಳು ಕಲೆ ಹಾಕಿದ್ದಾರೆ. ಆರೋಪಿಗಳಿಗೆ ಮಂಗಳವಾರ ನ್ಯಾಯಾಂಗ ಬಂಧನದ ಅವಧಿ ಮುಗಿದಿದ್ದು, ಬಂಧಿತ ಮೂವರು ಆರೋಪಿಗಳನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆಗಸ್ಥ್ 24 ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ವಿಸ್ತರಣೆ ಮಾಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಐಎ, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ. ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದಲೇ ಪ್ರವೀಣ್ ಅವರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಜುಲೈ 26ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಬೈಕ್‌ನಲ್ಲಿ ಬಂದ ಅಪರಿಚಿತರು ತಲವಾರಿನಿಂದ ಪ್ರವೀಣ್ ಅವರ ತಲೆಗೆ ಹೊಡೆದು ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮೃತಪಟ್ಟಿದ್ದರು.
ಒಟ್ಟು ಹತ್ತು ಮಂದಿ ಬಂಧನ
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಹತ್ತು ಮಂದಿ ಆರೋಪಿಗಳ ಬಂಧನ ಮಾಡಲಾಗಿದೆ. ಸವಣೂರು ನಿವಾಸಿ ಜಾಕಿರ್ (29),ಬೆಳ್ಳಾರೆ ನಿವಾಸಿ ಶಫೀಕ್ (27),ಪಳ್ಳಿಮೊಗರು ನಿವಾಸಿ ಸದ್ದಾಂ(32), ಪಳ್ಳಿಮಜಲು ನಿವಾಸಿ ಹ್ಯಾರಿಸ್ (42),ಸುಳ್ಯದ ನಾವೂರು ನಿವಾಸಿ ಹಬೀದ್ (22),ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28),ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33),ಸುಳ್ಯ ನಿವಾಸಿ ಶಿಹಾಬುದ್ದೀನ್(33), ಪುತ್ತೂರಿನ ಅಂಕತ್ತಡ್ಕ ನಿವಾಸಿ ರಿಯಾಝ್(27),ಸುಳ್ಯದ ಎಲಿಮಲೆ ನಿವಾಸಿ ಬಶೀರ್(28)ಎಂಬುವವರನ್ನು ಬಂಧನ ಮಾಡಲಾಗಿದೆ.