ಶಿರಾಡಿ ಘಾಟ್ ಕಾಮಗಾರಿ ಎಷ್ಟು ಮುಗಿದಿದೆ?
ಮಂಗಳೂರು, ಫೆ. 19 : ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಕಾಮಗಾರಿಯ ವೇಗವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟು 69 ಕೋಟಿ ವೆಚ್ಚದಲ್ಲಿ ಶಿರಾಡಿ ಘಾಟ್‌ನ 13 ಕಿ.ಮೀ. ರಸ್ತೆಯ ದುರಸ್ತಿ ನಡೆಯುತ್ತಿದೆ. 13 ಕಿ.ಮೀ. ರಸ್ತೆಯಲ್ಲಿ ಈವರೆಗೆ ಕೇವಲ 400 ಮೀ ಕಾಂಕ್ರಿಟೀಕರಣ ಕಾಮಗಾರಿ ನಡೆದಿದೆ. ಬಾಕಿ ಉಳಿದಿರುವ ರಸ್ತೆಯಲ್ಲಿ 6 ಕಿ.ಮೀಗೆ ಜಲ್ಲಿ ಹರಡಲಾಗಿದೆ. 3.62 ಕಿ.ಮೀ.ಗೆ ಜಲ್ಲಿ ಹರಡಲು ತಯಾರಿ ನಡೆಸಲಾಗುತ್ತಿದೆ.

69 ಮೋರಿಗಳ ಅಗಲೀಕರಣ : 13 ಕಿ.ಮೀ ರಸ್ತೆಯ ದುರಸ್ತಿಯಲ್ಲಿ ಒಟ್ಟು 69 ಮೋರಿಗಳಿವೆ. ಇವುಗಳಲ್ಲಿ 40 ಮೋರಿಗಳ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಉಳಿದ 29 ರಲ್ಲಿ 25ರ ಕಾಮಗಾರಿ ಪ್ರಗತಿಯಲ್ಲಿದೆ. [ಶಿರಾಡಿ ರಸ್ತೆ ರಿಪೇರಿಗೆ ಇನ್ನೆಷ್ಟು ದಿನ ಬೇಕು?]
ಶಿರಾಡಿ ಘಾಟ್ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಬುಧವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಂಪುಹೊಳೆ ಚೆಕ್‌ಪೋಸ್ಟ್‌ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ದೂರದ ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. [ಶಿರಾಡಿ ಬಂದ್, ಪರ್ಯಾಯ ಮಾರ್ಗಗಳು]
ಶಿರಾಡಿ ಘಾಟ್ ರಸ್ತೆಯ ಮೊದಲ ಹಂತದ ಕಾಮಗಾರಿಯನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈಗಾಗಲೇ ಹೇಳಿದ್ದಾರೆ. ಆದ್ದರಿಂದ ಗಡುವಿನೊಳಗೆ ಕಾಮಗಾರಿ ಮುಗಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟ್ ರಸ್ತೆಯನ್ನು ಜನವರಿ 2ರಿಂದ ಬಂದ್ ಮಾಡಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.












Click it and Unblock the Notifications