ಮಂಗಳೂರಿನಲ್ಲಿ ಮತ್ತೆ ಚೂರಿ ಇರಿತ? ಸುದ್ದಿ ಅಲ್ಲಗಳೆದ ಪೊಲೀಸ್
ಕೆಲವು ವಾಹಿನಿಗಳಲ್ಲಿ ಮಂಗಳೂರಿನಲ್ಲಿ ಮತ್ತೆ ಚೂರಿ ಇರಿತ ಎಂಬ ಸುದ್ದಿ ಬಿತ್ತರವಾಗಿದೆ. ರಿಯಾಜ್ ಎಂಬುವರ ಮೇಲೆ ಚೂರಿಯಿಂದ ಹಲ್ಲೆಯಾಗಿದೆ ಎಂದು ಹೇಳಿವೆ. ಆದರೆ, ಜಿಲ್ಲಾ ಪೊಲೀಸ್ ಇದನ್ನು ನಿರಾಕರಿಸಿದೆ.
ಮಂಗಳೂರು, ಜುಲೈ 8: ಕೋಮು ಸಂಘರ್ಷ ತಾಂಡವವಾಡುತ್ತಿರುವ ಮಂಗಳೂರು ಜಿಲ್ಲೆಯಲ್ಲಿ ಶನಿವಾರ ಮತ್ತೊಂದು ಚೂರಿ ಇರಿತ ಪ್ರಕರಣ ನಡೆದಿದೆಯೆಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಇದು ಕೇವಲ ವದಂತಿ ಎಂದು ಹೇಳಿದ್ದಾರೆ.
ಆದರೆ, ಕೆಲ ವಾಹನಿಗಳಲ್ಲಿ ಬಂದ ವರದಿಯ ಪ್ರಕಾರ, ರಿಯಾಜ್ ಎಂಬಾತನ ಕುತ್ತಿಗೆಗೆ ದುಷ್ಕರ್ಮಿಗಳು ಚೂರಿಯಿಂದ ಹಲ್ಲೆ ನಡೆಸಿದ್ದು, ಆತನಿಗೆ ಮಧ್ಯಮ ಸ್ವರೂಪದ ಗಾಯಗಳಾಗಿವೆ. ಮಂಗಳೂರಿನ ಕೈ ಕಂಬ ಎಂಬಲ್ಲಿ ಈ ಘಟನೆ ನಡೆದಿದೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ.

ದಿಗ್ಭ್ರಾಂತರಾಗಿರುವ ಜನ
ವಾಹಿನಿಗಳ ವರದಿಗಳು, ಪೊಲೀಸರ ಪ್ರತಿಕ್ರಿಯೆಗಳು, ಕಣ್ಣ ಮುಂದೆ ನಡೆಯುತ್ತಿರುವ ಘಟನೆಗಳು - ಇವೆಲ್ಲವೂ ಮಂಗಳೂರು ಜನತೆಯನ್ನು ಗೊಂದಲದಲ್ಲಿ ದೂಡಿರುವುದಂತೂ ಸತ್ಯ.
ಇದೇ ಕೈಕಂಬದಲ್ಲಿ ಶನಿವಾರ ಮಧ್ಯಾಹ್ನವಷ್ಟೇ ಉದ್ರಿಕ್ತ ಗುಂಪುಗಳಿಂದ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಕಾರುಗಳು, ಆಟೋ ರಿಕ್ಷಾ ಸೇರಿದಂತೆ ಹಲವಾರು ವಾಹನಗಳು ಜಖಂ ಆಗಿದ್ದವು. ಒಬ್ಬ ವ್ಯಕ್ತಿ ಗಾಯಗೊಂಡಿದ್ದ.
ಇತ್ತೀಚೆಗೆ, ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಶರತ್ ಮಡಿವಾಳ ಅವರು ಶನಿವಾರ ಅಸುನೀಗಿದ ಹಿನ್ನೆಲೆಯಲ್ಲಿ ಮಂಗಳವಾರ ಪರಿಸ್ಥಿತಿ ಮತ್ತೆ ಉದ್ವಿಘ್ನಗೊಂಡಿದೆ.
ಕೆಲ ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಇಂಥ ಘಟನೆಗಳು ನಡೆಯುತ್ತಿರುವುದು ಅಲ್ಲಿನ ಜನರನ್ನು ಮತ್ತಷ್ಟು ತಲ್ಲಣಗೊಳಿಸಿದೆ.












Click it and Unblock the Notifications