ನಳಿನ್ ಕುಮಾರ್ ಕಟೀಲ್ ಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ
ಮಂಗಳೂರು, ಆಗಸ್ಟ್ 21: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಂಗಳೂರಿನಲ್ಲಿ ಇಂದು ಅದ್ಧೂರಿ ಸ್ವಾಗತ ನೀಡಲಾಗಿದೆ. ಕೇರಳದ ಎರ್ನಾಕುಲಂನಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಇಂದು ಮುಂಜಾನೆ ಮಂಗಳೂರಿನ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ನಳಿನ್ ಕುಮಾರ್ ಕಟೀಲ್ ಅವರನ್ನು ಸಾವಿರಾರು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.
ಆರತಿ ಬೆಳಗಿ, ಶಾಲು ಹಾರ ಹಾಕಿ ಜಿಲ್ಲಾ ಬಿಜೆಪಿ ಮುಖಂಡರು ನಳಿನ್ ಕುಮಾರ್ ಕಟೀಲ್ ಅವರನ್ನು ಸ್ವಾಗತ ಮಾಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನನ್ನ ಮೇಲೆ ಭರವಸೆಯಿಟ್ಟು ಈ ಸ್ಥಾನ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆ ನಿರೀಕ್ಷೆಗೆ ಚ್ಯುತಿ ಬಾರದಂತೆ ಕೆಲಸ ಮಾಡಿ, ರಾಜ್ಯದ ಹಿರಿಯ ನಾಯಕರ ಸಲಹೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಕಾರ್ಯಕರ್ತರ, ನಾಯಕರ ಭರವಸೆಯನ್ನು ಉಳಿಸುತ್ತೇನೆ" ಎಂದು ಹೇಳಿದರು.

"ನನಗೆ ಹಾರ ತುರಾಯಿ ಶಾಲು ಹಾಕುವ ಬದಲು ಆ ಹಣವನ್ನು ರಾಜ್ಯದ ನೆರೆ ಸಂತ್ರಸ್ತರಿಗೆ ನೀಡಿ" ಎಂದು ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದರು.












Click it and Unblock the Notifications