ಮೂಡುಬಿದಿರೆ : ಪ್ರಶಾಂತ್ ಹತ್ಯೆ 10ನೇ ಆರೋಪಿ ಬಂಧನ
ಮೂಡುಬಿದಿರೆ, ಅಕ್ಟೋಬರ್ 28 : ಮೂಡುಬಿದಿರೆಯ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇದುವರೆಗೆ ಮೂಡುಬಿದಿರೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗಂಟಾಲ್ಕಟ್ಟೆಯ ಬದ್ರುದ್ದೀನ್ ಎಂದು ಗುರುತಿಸಲಾಗಿದೆ. ಪ್ರಶಾಂತ್ ಪೂಜಾರಿ ಕೊಲೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಗಂಟಾಲ್ಕಟ್ಟೆಯಲ್ಲಿ ಬಸ್ ಕಾಯುತ್ತಿದ್ದಾಗ ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.[ಮೂಡಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೇನು?]

ಬಂಧಿತ ಆರೋಪಿ ಬದ್ರುದ್ದೀನ್ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ಇತರ ಆರೋಪಿಗಳಾದ ಮುಹಮ್ಮದ್ ಹನೀಫ್ ಆದ್ಯಪಾಡಿ, ಮುಹಮ್ಮದ್ ಮುಸ್ತಫಾ ಬಜ್ಪೆ, ಮುಹಮ್ಮದ್ ಮುಸ್ತಫಾ ಕಾವೂರು, ಕಬೀರ್ ಕಂದಾವರ, ಮುಹಮ್ಮದ್ ಶರೀಫ್ ತೋಡಾರು, ಇಮ್ತಿಯಾಝ್ ಗಂಟಾಲ್ಕಟ್ಟೆ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲರನ್ನೂ ಪೊಲೀಸರ ವಶಕ್ಕೆ ನೀಡಲಾಗಿದೆ. [ಪ್ರಶಾಂತ್ ಹತ್ಯೆ ಮತ್ತೆ ನಾಲ್ವರ ಬಂಧನ]
ಮೂಡಬಿದಿರೆಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಪ್ರಶಾಂತ್ ಪೂಜಾರಿ ಹಿಂದೂಪರ ಸಂಘಟನೆಯಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ. ಅಕ್ಟೋಬರ್ 9ರಂದು ಮೂಡಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ಬಳಿ ಹತ್ಯೆ ಆರೋಪಿಗಳು ಪ್ರಶಾಂತ್ ಹತ್ಯೆ ಮಾಡಿ ಪರಾರಿಯಾಗಿದ್ದರು. [ಪ್ರಶಾಂತ್ ಕೊಲೆಯ ಪ್ರತ್ಯಕ್ಷದರ್ಶಿ ಸಾವು]
ಈ ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿದ್ದ ವಾಮನ ಪೂಜಾರಿ ಅವರು ಅಕ್ಟೋಬರ್ 22ರಂದು ಸಾವನ್ನಪ್ಪಿದ್ದರು. ವಾಮನ ಪೂಜಾರಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಅವರಿಗೆ ಪಾಕಿಸ್ತಾನದ ನಂಬರ್‌ಗಳಿಂದ ಬೆದರಿಕೆ ಕರೆ ಬರುತ್ತಿತ್ತು. ಇದರಿಂದಾಗಿ ಅವರು ಸಾವಿಗೆ ಶರಣಾದರು ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications