Mansoon Rain: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕು, ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನೆ
ಮಂಗಳೂರು, ಜೂನ್, 12: ಈಗಾಗಲೇ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಿದ್ದು, ಇನ್ನು ಹಲವೆಡೆ ಮಳೆ ಬಾರದೇ ಅನ್ನದಾತರು ಕಂಗಾಲಾಗಿದ್ದಾರೆ. ಇನ್ನು ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆ ಇಲ್ಲಿನ ಜನರು ಕಡಲ್ಕೊರೆತದ ಆತಂಕದಲ್ಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಈ ಹಿನ್ನೆಲೆ ಬಿಸಿಲ ಬೇಗೆಯಿಂದ ಬೆಂದಿದ್ದ ಇಡೀ ಜಿಲ್ಲೆಯಲ್ಲಿ ಸದ್ಯ ತಂಪಾದ ವಾತವರಣ ಮುಂದುವರೆದಿದೆ. ಅಲ್ಲದೆ ಜಿಲ್ಲೆಯಲ್ಲಿ ಮೋಡ ಕವಿದ ವಾತವರಣ ಕಂಡುಬಂದಿದ್ದು, ಅಲ್ಲಲ್ಲಿ ಮಳೆಯಾಗಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬಿಟ್ಟು ಬಿಡದೇ ಮಳೆರಾಯ ಅಬ್ಬರಿಸಿದ್ದಾನೆ. ಇದರಿಂದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಬೇಸತ್ತಿದ್ದ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.

ಶನಿವಾರದಿಂದಲೇ ಜಿಲ್ಲೆಯಾದ್ಯಾಂತ ಮಳೆಯಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗಗಳಾದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ಬಿರುಸಿನ ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಶನಿವಾರದಿಂದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಲ್ಲೇ ಠಿಕಾಣಿ ಹೂಡಿವೆ.
ಪಶ್ಚಿಮ ಘಟ್ಟ ಭಾಗದಲ್ಲಿಯೂ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಕುಮಾರಾಧಾರಾ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಮಟ್ಟಿಗೆ ಕಂಡುಬಂದಿದೆ. ಮತ್ತೊಂದೆಡೆ ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ. ಎಎಂಆರ್ ಡ್ಯಾಂ, ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗಿ ಮಂಗಳೂರಿಗೆ ನಿರಂತರವಾಗಿ ನೀರಿನ ಪೂರೈಕೆ ಮಾಡಬಹುದೆನ್ನುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.
ಇನ್ನು ಉಳ್ಳಾಲದ ಕೈಕೋ, ಮುಕ್ಕಚ್ಚೇರಿ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಹೀಗೆ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಮತ್ತು ಪ್ರವಾಸಿಗರಿಗೆ ಸೂಚನೆ ನೀಡಿದೆ. ಅಲ್ಲದೆ ಜಿಲ್ಲಾಡಳಿತದ ಸೂಚನೆ ಇದ್ದರೂ ಪ್ರವಾಸಿಗರು ಕಡಲತಡಿಗೆ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಪ್ರವಾಸಿಗರನ್ನು ನಿಯಂತ್ರಿಸಲು ಸಮುದ್ರ ತೀರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications