ಪುತ್ತೂರು: ಮಹಿಳೆಯರಿಗೆ ಆಶ್ರಯ ಕಲ್ಪಿಸಿತು ಸ್ವಯಂಸೇವಕ ಸಂಘ
ಪುತ್ತೂರು, ಸೆಪ್ಟೆಂಬರ್,22 : ಜೂನ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆ ಕುಸಿದ ಪರಿಣಾಮ ಒಂದು ಮಹಿಳಾ ಕುಟುಂಬ ಬೀದಿ ಪಾಲಾಗಿತ್ತು. ಈ ಕುಟುಂಬಕ್ಕೊಂದು ಸೂರು ಕಟ್ಟಿಸಿಕೊಟ್ಟು, ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕಡಬ ಸಮೀಪದ ಕಲಾರ ಎಂಬಲ್ಲಿ ಒಂದು ಮಹಿಳಾ ಕುಟುಂಬ ವಾಸವಾಗಿತ್ತು. ಜೂನ್ ತಿಂಗಳಲ್ಲಿ ನಗರದಲ್ಲಿ ಭಾರೀ ಮಳೆ ಬಂದಿದ್ದರಿಂದ ವಾಸಿಸಲು ಇದ್ದ ಏಕೈಕ ಮನೆಯೂ ಕುಸಿದು ಬಿದ್ದಿತ್ತು. ಬಳಿಕ ಅವರಿವರ ಸಹಾಯದಿಂದ ಒಂದು ಟಾರ್ಪಲ್ ಮನೆ ಅವರ ಪಾಲಿಗೆ ದಕ್ಕಿತು. ಆದರೂ ಮಹಿಳೆಯರ ಧಾರುಣ ಸ್ಥಿತಿ ಕೊಂಚವೂ ಸುಧಾರಿಸಿರಲಿಲ್ಲ.[ರಾಜ್ಯಾದ್ಯಂತ ಮಳೆ: ಜಲಾಶಯಗಳ ಮಟ್ಟ ಎಷ್ಟಿದೆ?]

ಊಟ, ವಸತಿ ಇಲ್ಲದೇ ಜೀವನ ಸಾಗಿಸುತ್ತಿದ್ದ ಈ ಮಹಿಳೆಯರ ಕಡು ಕಷ್ಟದ ಬದುಕನ್ನು ವಾಟ್ಸಪ್ ಸಂದೇಶದಿಂದ ತಿಳಿದ ಸಮಾಜ ಸೇವಾ ಘಟಕ ತಂಡ ಇವರಿಗೊಂದು ಮನೆ ಕಟ್ಟಿಸಿ, ರೇಶನ್ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದು, ಸೆಪ್ಟೆಂಬರ್ 20 ರ ಭಾನುವಾರದಂದು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನ ಯಹ್ಯಾ ಅವರ ನೇತೃತ್ವದಲ್ಲಿ ಮನೆಯ ಕೀಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಗಂಡು ದಿಕ್ಕಿಲ್ಲದ ಈ ಮನೆಯಲ್ಲಿ ಒಂಭತ್ತು ಜನರ ಹೆಂಗಳೆಯರ ಕುಟುಂಬಕ್ಕೆ ಇದೀಗ ಆಶ್ರಯ ದೊರೆತಂತಾಗಿದೆ. ಈ ಮನೆಗೆ ಈಗಾಗಲೇ ಒಂದು ಲಕ್ಷದ ಹತ್ತು ಸಾವಿರ ತಗುಲಿದ್ದು, ಇನ್ನೊಂದು ಮನೆಯನ್ನು ಕಟ್ಟಿಸಿಕೊಡಲು ಸೇವಾ ಘಟಕ ಚಿಂತನೆ ನಡೆಸಿದೆ ಎಂದು ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.
ನೆರವು ನೀಡಲು ಮನವಿ :
ಸಮಾಜ ಸೇವಾ ಘಟಕ ಹಲವಾರು ನಿರ್ಗತಿಕರಿಗೆ ದಾನಿಗಳ ನೆರವಿನೊಂದಿಗೆ ಮನೆ ನಿರ್ಮಿಸಿಕೊಡುವ ಹಾಗೂ ಅವರ ಅವಶ್ಯಕತೆಗಳನ್ನು ಪೂರೈಸುವ ಯೋಜನೆ ಹಾಕಿಕೊಂಡಿದ್ದಾರೆ. ಸದ್ಯದಲ್ಲಿಯೇ ಈ ಮಹಿಳೆಯರ ಮನೆಯ ಪಕ್ಕದಲ್ಲಿಯೇ ಇನ್ನೊಂದು ಮನೆ ಕಟ್ಟಲು ಚಿಂತನೆ ನಡೆಸಲಾಗಿದ್ದು ಇದಕ್ಕಾಗಿ ದಾನಿಗಳ ನೆರವನ್ನು ನಿರಿಕ್ಷಿಸಿದ್ದೇವೆ ಎಂದು ಸಮಾಜ ಸೇವಾ ಘಟಕದ ಮಹಮ್ಮದ್ ಮುಹ್ಸಿನ್ ತಿಳಿಸಿದ್ದಾರೆ.












Click it and Unblock the Notifications