ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್‌ಗೆ ದಿನಾಂಕ ನಿಗದಿ: ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ವಿವರ
ಮಂಗಳೂರು, ಜನವರಿ 02: ಕಳೆದ ಎರಡು ಆವೃತ್ತಿಗಳು ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತ ಈ ಬಾರಿಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ನಡೆಸಲು ಸಜ್ಜಾಗಿದೆ. ಈ ಬಾರಿಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ಸೀಸನ್ 3 ಜನವರಿ 18ರಿಂದ 22ರವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಹಿಂದೆ ಸ್ಟ್ರೀಟ್ ಫುಡ್ ಫಿಯೆಸ್ಟ್ ಸೀಸನ್ 3ರನ್ನು ಜನವರಿ 15 ರಿಂದ 19ರವರೆಗೆ ನಡೆಸಲು ನಿಗದಿಯಾಗಿತ್ತು. ಈ ದಿನಾಂಕವೇ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಜನವರಿ 17ರ ಸಂಜೆ ಮಂಗಳೂರು ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಭದ್ರತೆ ಹಾಗೂ ಇನ್ನಿತರ ಕಾರಣಗಳಿಗೆ ಜಿಲ್ಲಾಡಳಿತದ ಮನವಿಯ ಮೇರೆಗೆ ಸ್ಟ್ರೀಟ್ ಫುಡ್ ಫಿಯೆಸ್ಟ್ ದಿನಾಂಕದಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಸದ್ಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ಸೀಸನ್ 3 ಜನವರಿ 18 ರಿಂದ 22ರವರೆಗೆ ನಡೆಯಲಿದೆ ಎನ್ನುವುದು ಖಚಿತವಾಗಿದೆ.
ಪ್ರತಿದಿನ ಸಂಜೆ 4ರಿಂದ ರಾತ್ರಿ 10ರವರೆಗೆ ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವದವರೆಗೆ ಈ ಸ್ಟ್ರೀಟ್ ಫುಡ್ ಫಿಯೆಸ್ಟ್ ನಡೆಯಲಿದೆ. ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ಸೀಸನ್ 3ರ ಸಿದ್ಧತೆ ಭರದಿಂದ ಸಾಗುತ್ತಿದ್ದು, ಆನ್ ಲೈನ್ ಮೂಲಕ ನೂರಕ್ಕೂ ಅಧಿಕ ಸಂಖ್ಯೆಯ ಆಹಾರ ಮಳಿಗೆಗಳು ಈಗಾಗಲೇ ನೋಂದಾಯಿಸಿಕೊಂಡಿವೆ. ಇನ್ನು ಕೆಲವೇ ಕೆಲವು ಮಳಿಗೆಗಳು ಮಾತ್ರ ಬಾಕಿ ಉಳಿದಿದ್ದು ಆಸಕ್ತರು ಕೂಡಲೇ ಆನ್ ಲೈನ್ ಮೂಲಕವೇ ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಈ ಬಾರಿ ಸ್ಟ್ರೀಟ್ ಫುಡ್ ಫಿಯೆಸ್ಟ್‌ನಲ್ಲಿ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ಕರಾವಳಿಯ ವಿಶೇಷ ಖಾದ್ಯ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ. ಈ ಬಾರಿ ವಿಶೇಷ ಎಂಬಂತೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಸ್ಯಾಹಾರಿ ಮತ್ತು ಮಾಂಸಹಾರಿಗಳಿಗೆ ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಕೂಡ ಇರಲಿದೆ.
ಈ ಬಾರಿ ಮಕ್ಕಳ ಆಟದ ಜೋನ್‌ಗೆ ವಿಶೇಷ ಅವಕಾಶ ನೀಡಲಾಗಿದೆ. ಐದು ದಿನಗಳಲ್ಲಿ ಏಕಕಾಲಕ್ಕೆ ಹಲವು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿದೆ. ನಮ್ಮ ವೇದಿಕೆ- ನಿಮ್ಮ ಪ್ರತಿಭೆ, ಸೆಲ್ಫಿ ಕೌಂಟರ್, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಲು ವಿಶೇಷ ಅವಕಾಶ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ಆಯೋಜಕರ ತಂಡ ತಿಳಿಸಿದೆ.












Click it and Unblock the Notifications