ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಸೇರಲಿದೆ ಮಂಗಳೂರು?
ಮಂಗಳೂರು, ಡಿಸೆಂಬರ್ 11: ಕರ್ನಾಟಕದ ಕರಾವಳಿ ಭಾಗದ ರೈಲು ಆಡಳಿತವನ್ನು ನೈಋತ್ಯ ರೈಲ್ವೆ ವಲಯಕ್ಕೆ ತರಬೇಕು ಎಂಬ ಬೇಡಿಕೆ ಕೇಳಿ ಬರುತ್ತಲೇ ಇದೆ. ಕರಾವಳಿ ಭಾಗದ ರೈಲ್ವೆ ಆಡಳಿತ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಎಂದು ಮೂರು ವಿಭಾಗವಾಗಿದ್ದು, ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸದಾ ತೊಡಕು ಉಂಟಾಗುತ್ತಿದೆ.
ಈಗ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಲೋಕಸಭೆ ಕಲಾಪದಲ್ಲಿ ಈ ಕುರಿತು ಮಾತನಾಡಿದ್ದಾರೆ. ಈ ಹಿಂದೆ ಅವರು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದರು. ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕು ಎಂದು ಸಂಸದರು ಮನವಿ ಮಾಡಿದ್ದರು.

ಸಂಸದರ ಪೋಸ್ಟ್: ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಂಸದ ಬ್ರಿಜೇಶ್ ಚೌಟ, 'ಮಂಗಳೂರು ರೈಲ್ವೆ ಆಡಳಿತ ಪುನರ್ ಸಂಘಟನೆಯ ಅಗತ್ಯತೆಯ ಬಗ್ಗೆ ಇಂದು ಲೋಕಸಭೆ ಪ್ರಶ್ನೋತ್ತರ ಅವಧಿಯಲ್ಲಿ ಧ್ವನಿ ಎತ್ತಿದೆನು. ಮಂಗಳೂರು-ಬೆಂಗಳೂರು ರೈಲು ಮಾರ್ಗವು ನೈರುತ್ಯ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಆದರೆ ಮಂಗಳೂರಿನ ಎರಡು ನಿಲ್ದಾಣಗಳಾದ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ದಕ್ಷಿಣ ರೈಲ್ವೆ ವ್ಯಾಪ್ತಿಗೆ ಬರುತ್ತವೆ' ಎಂದು ಹೇಳಿದ್ದಾರೆ.
'ಈ ಸಂಬಂಧ ಈ ಚಳಿಗಾಲದ ಅಧಿವೇಶನದ ಆರಂಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ನನ್ನ ಕಳವಳಗಳನ್ನು ವ್ಯಕ್ತಪಡಿಸಿದ್ದೆ. ಅವರ ಬೆಂಬಲದೊಂದಿಗೆ, ನಮ್ಮ ಭಾಗದಲ್ಲಿ ಬದಲಾವಣೆಗಳು ಆರಂಭವಾಗಬಹುದು ಎಂಬ ವಿಶ್ವಾಸವಿದೆ. ವಾಣಿಜ್ಯ ಹಾಗೂ ಬಂದರು ನಗರಿಯಾಗಿರುವ ಮಂಗಳೂರಿನ ರೈಲ್ವೆಯ ಮೂಲ ಸೌಕರ್ಯಗಳ ಹಾಗೂ ಆಡಳಿತಾತ್ಮಕ ಸುಧಾರಣೆಯಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಅಲ್ಲದೆ ರೈಲ್ವೆಯು ಜನರ ಮತ್ತು ಸರಕು ಸಾಗಣೆಯ ಜೀವಾಳವಾಗಿರುವುದರಿಂದ ಪ್ರಯಾಣ, ವಹಿವಾಟು ಮತ್ತು ವಾಣಿಜ್ಯ ದೃಷ್ಟಿಯಿಂದಲೂ ಹೆಚ್ಚಿನ ಅನುಕೂಲವಾಗಲಿದೆ' ಎಂದು ಹೇಳಿದ್ದಾರೆ.
ಸಂಸದರ ಪತ್ರದ ವಿವರಗಳು: ಮಂಗಳೂರು ರೈಲ್ವೆ ಆಡಳಿತವನ್ನು ಗಮನಿಸುವ ಕುರಿತು ಎಂದು ಸಂಸದರು ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದರು. ಮಂಗಳೂರು ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಸೇರಿಸುವ ಕುರಿತು ಪರಿಶೀಲನೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ. ಸದ್ಯ ಮಂಗಳೂರು ದಕ್ಷಿಣ ರೈಲ್ವೆಯ ವ್ಯಾಪ್ತಿಯಲ್ಲಿದ್ದು, ಪಾಲ್‌ಘಾಟ್‌ನಲ್ಲಿ ಆಡಳಿತ ಕೇಂದ್ರವಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.
ಕರ್ನಾಟಕ ಕರಾವಳಿಯ ಬಹುಮುಖ್ಯವಾದ ನಗರ ಮಂಗಳೂರು. ವಾಣಿಜ್ಯ ಮತ್ತು ಪ್ರವಾಸದ ದೃಷ್ಟಿಯಿಂದ ಮಹತ್ವದ್ದು. ಆದರೆ ಈಗಿರುವ ರೈಲು ಜಾಲ ದಕ್ಷಿಣ ರೈಲ್ವೆ, ಕೊಂಕಣ ರೈಲ್ವೆ ನಿಗಮ ಮತ್ತು ನೈಋತ್ಯ ರೈಲ್ವೆ ಎಂದು ಮೂರು ವಿಭಾಗವಾಗಿದೆ. ಆಡಳಿತ ಕಛೇರಿ ಇರುವ ಪಾಲ್‌ಘಾಟ್ 10 ಗಂಟೆ ಕ್ರಮಿಸುವಷ್ಟು ದೂರದಲ್ಲಿದೆ. ಮಂಗಳೂರಿನಿಂದ 350 ಕಿ. ಮೀ. ದೂರವಿದೆ. ಇದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ.
ಮಂಗಳೂರು ನಗರದ ವ್ಯಾಪ್ತಿಯಲ್ಲಿ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ರೈಲು ನಿಲ್ದಾಣಗಳಿವೆ. ಈ ಮೂರು ನಿಲ್ದಾಣಗಳು ಪ್ರಸ್ತುತ ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದೆ. ಇದನ್ನು ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಸೇರಿಸುವ ಕುರಿತು ಪರಿಶೀಲನೆ ನಡೆಸಬೇಕು. ಮಂಗಳೂರಿನಿಂದ ಮೈಸೂರು ಸುಮಾರು 250 ಕಿ. ಮೀ. ದೂರದಲ್ಲಿದ್ದು, ಅಲ್ಲೇ ಆಡಳಿತ ಕಛೇರಿ ಇರುವ ಕಾರಣ ಅನುಕೂಲವಾಗಲಿದೆ.
ಮಂಗಳೂರು ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರು ರೈಲ್ವೆ ಆಡಳಿತವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಂಸದರು ರೈಲ್ವೆ ಸಚಿವರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications