ಮಂಗಳೂರಿಗೆ ಮೊದಲ ಮೆಮು ರೈಲು; ವೇಳಾಪಟ್ಟಿ
ಮಂಗಳೂರು, ಜನವರಿ 21; ಮಂಗಳೂರು ನಗರದಲ್ಲಿ ಮೊದಲ ಬಾರಿಗೆ ಮೆಮು ರೈಲುಗಳು ಸಂಚಾರ ನಡೆಸಲಿವೆ. ಮಂಗಳೂರು ಸೆಂಟ್ರಲ್-ಕಣ್ಣೂರು- ಮಂಗಳೂರು ಸೆಂಟ್ರಲ್ ರೈಲು ಜನವರಿ 26ರಿಂದ ಮೆಮು ರೈಲು ಆಗಿ ಸಂಚಾರ ನಡೆಸಲಿದೆ.
ದಕ್ಷಿಣ ರೈಲ್ವೆ ಜನವರಿ 26ರಿಂದ ರೈಲು ನಂಬರ್ 06478/ 06477 ಮಂಗಳೂರು ಸೆಂಟ್ರಲ್- ಕಣ್ಣೂರು- ಮಂಗಳೂರು ಸೆಂಟ್ರಲ್ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೆಮು (Mainline Electric Multiple Unit) ರೈಲಾಗಿ ಪರಿವರ್ತನೆ ಮಾಡಲಿದೆ.
ಸಾಮಾನ್ಯ ರೈಲುಗಳಿಗಿಂತ ಮೆಮು ರೈಲುಗಳಲ್ಲಿ ಹೆಚ್ಚು ಜನರು ಸಂಚಾರ ನಡೆಸಬಹುದಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮೆಮು ರೈಲು ರಿವರ್ಸ್ ಹೋಗಲು ಲೋಕೋದ ಅಗತ್ಯವಿಲ್ಲ, ಇದರಿಂದಾಗಿ ರೈಲು ಸಂಚಾರದ ಅವಧಿ ಕೂಡ ಕಡಿತವಾಗಲಿದೆ.

ಚೆನ್ನೈನ ರೈಲು ಕೋಚ್ ಫ್ಯಾಕ್ಟರಿಯಲ್ಲಿ 12 ಕೋಚ್‌ಗಳನ್ನು ಹೊಂದಿರುವ ಮೋಟಾರ್ ಕಾರ್ ತಯಾರು ಮಾಡಲಾಗಿದೆ. ಸಾಂಪ್ರದಾಯಿಕ ರೈಲು ಬೋಗಿಗಳನ್ನು ಮೆಮು ರೈಲು ಕೋಚ್‌ಗಳೊಂದಿಗೆ ಬದಲಾವಣೆ ಮಾಡಲಾಗಿದೆ.
ಒಂದು ಬೋಗಿಯಲ್ಲಿ 55 ಜನರು ಕುಳಿತು ಪ್ರಯಾಣ ಬೆಳೆಸಬಹುದಾಗಿದೆ. ನಿಂತು 171 ಜನರು ಸಂಚಾರ ನಡೆಸಬಹುದಾಗಿದೆ. ಸಾಂಪ್ರದಾಯಿಕ ಬೋಗಿಯಲ್ಲಿ 2,634 ಜನರು ಸಂಚಾರ ನಡೆಸಬಹುದಿತ್ತು. ಈಗ 3603 ಜನರು ಸಂಚಾರ ನಡೆಸಬಹುದಾಗಿದೆ.
ಸ್ಟೀಲ್ ಕೋಚ್‌ಗಳನ್ನು ಹೊಂದಿರುವ ಬೋಗಿಯಲ್ಲಿ ಸ್ಲೈಡಿಂಗ್ ಡೋರ್‌ಗಳು ಹೊಂದಿವೆ. ಬೋಗಿಗಳು ಸಿಸಿಟಿವಿ ಕ್ಯಾಮರಾಗಳನ್ನು ಹೊಂದಿವೆ. ಎಲ್‌ಇಡಿ ಲೈಟ್ ವ್ಯವಸ್ಥೆ ಇದೆ. ಪ್ರಯಾಣಿಕರಿಗೆ ಜಿಪಿಎಸ್ ಮಾದರಿ ಮಾಹಿತಿ ತಿಳಿಸಲಾಗುತ್ತದೆ.
Recommended Video
ವೇಳಾಪಟ್ಟಿ: ರೈಲು ಸಂಖ್ಯೆ 06477 ಕಣ್ಣೂರಿನಿಂದ ಬೆಳಗ್ಗೆ 7.40ಕ್ಕೆ ಹೊರಡಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ 10.55ಕ್ಕೆ ತಲುಪಲಿದೆ. ರೈಲು ನಂಬರ್ 06478 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಂಜೆ 5.05ಕ್ಕೆ ಹೊರಡಲಿದ್ದು, ಕಣ್ಣೂರಿಗೆ ರಾತ್ರಿ 8.40ಕ್ಕೆ ತಲುಪಲಿದೆ. ಒಟ್ಟು 132 ಕಿ.ಮೀ, 18 ನಿಲ್ದಾಣಗಳು, ಪ್ರಯಾಣದ ಅವಧಿ 3 ಗಂಟೆ 15 ನಿಮಿಷ.
ವಿಶೇಷ ರೈಲು ಆಗಿ ಪರಿವರ್ತನೆ; ರೈಲ್ವೆ ಇಲಾಖೆ ಕಬಕ ಪುತ್ತೂರು-ಮಂಗಳೂರು ಸೆಂಟರ್-ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ನಡುವಿನ ಪ್ಯಾಸೆಂಜರ್ ರೈಲನ್ನು ಕೋವಿಡ್ ಪರಿಸ್ಥಿತಿ ಕಾರಣ ವಿಶೇಷ ರೈಲಾಗಿ ಪರಿವರ್ತನೆ ಮಾಡಲಾಗಿದೆ. ಇದರಿಂದಾಗಿ ರೈಲಿನ ದರವೂ ಹೆಚ್ಚಳವಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗಿದೆ.
ಇದರಿಂದಾಗಿ ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವಿನ 45 ಕಿ. ಮೀ. ಅಂತರದ ಪ್ರಯಾಣ ದರ 15 ರೂ. ನಿಂದ 30ಕ್ಕೆ ಏರಿಕೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಭಾರತೀಯ ರೈಲ್ವೆ ಓಡಿಸುವ ವಿಶೇಷ ರೈಲುಗಳ ದರ ಸಾಮಾನ್ಯ ರೈಲಿಗಿಂತ ಹೆಚ್ಚಾಗಿರುತ್ತದೆ.
ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಪ್ಯಾಸೆಂಜರ್ ರೈಲನ್ನು ವಿಶೇಷ ರೈಲಾಗಿ ಪರಿವರ್ತನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ಆದೇಶದ ತನಕ ಪ್ಯಾಸೆಂಜರ್ ರೈಲು ವಿಶೇಷ ರೈಲಾಗಿ ಸಂಚಾರ ನಡೆಸಲಿದೆ.
ದರದಲ್ಲಿ ಬದಲಾವಣೆ; ಕಬಕ ಪುತ್ತೂರು-ಸುಬ್ರಮಣ್ಯ ರಸ್ತೆ ನಡುವಿನ 50 ಕಿ. ಮೀ. ದೂರದ ಪ್ರಯಾಣ ದರವೂ 15 ರೂ. ನಿಂದ 30 ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣದ ನಡುವಿನ 95 ಕಿ. ಮೀ. ಅಂತದ ಪ್ರಯಾಣ ದರ 30 ರೂ. ನಿಂದ 50 ರೂ.ಗೆ ಏರಿಕೆಯಾಗಿದೆ.
ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವೆ ಸಂಚಾರ ನಡೆಸುವ ವಿಶೇಷ ರೈಲು ಮಂಗಳೂರಿಗೆ ತೆರಳುವಾಗ ನೇರಳಕಟ್ಟೆ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಆದರೆ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ರೈಲು ನೇರಳಕಟ್ಟೆಯಲ್ಲಿ ನಿಲ್ಲುವುದಿಲ್ಲ.
ಉಳಿದಂತೆ ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರಸ್ತೆ ತನಕ ಸಂಚಾರ ನಡೆಸುವ ರೈಲು ಎಲ್ಲಾ ನಿಲ್ದಾಣಗಳಲ್ಲಿಯೂ ನಿಲುಗಡೆಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.












Click it and Unblock the Notifications