ಮಂಗಳೂರು ಸ್ಫೋಟ ಪ್ರಕರಣ: ಆರೋಪಿ ಶಾರೀಕ್‌ನನ್ನು ಬೆಂಗಳೂರಿಗೆ ಕರೆತಂದ NIA, ಹಲವೆಡೆ ಸ್ಥಳ ಮಹಜರು
ಮಂಗಳೂರು, ಜುಲೈ, 28: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎನ್‌ಐಎ ಅಧಿಕಾರಿಗಳು ಮೈಸೂರು, ಮಡಿಕೇರಿ ಮತ್ತು ಮಂಗಳೂರಿನಲ್ಲಿ ಸದ್ದಿಲ್ಲದೆ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿ ಪ್ರಕರಣದ ಆರೋಪಿ ಎನ್ನಲಾದ ಶಾರಿಕ್‌ನನ್ನು ವಾಪಸ್ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎನ್‌ಐಎ ಅಧಿಕಾರಿಗಳು ಮೈಸೂರಿನಲ್ಲಿ ಶಾರಿಕ್ ವಾಸ್ತವ್ಯವಿದ್ದ ಸ್ಥಳ, ಹಣ ಪಡೆದ ಜಾಗ, ಮೈಸೂರಿನಿಂದ ಬಸ್ ಹತ್ತಿ ಮಡಿಕೇರಿಗೆ ಹೊರಟಿದ್ದು, ಮಡಿಕೇರಿಯಲ್ಲಿ ಬಸ್ ಬದಲಾಯಿಸಿ ಮಂಗಳೂರು ಕಡೆಗೆ ಹೊರಟಿದ್ದು, ನಂತರ ಮಂಗಳೂರಿನಲ್ಲಿ ಬಸ್ ಇಳಿದ ಜಾಗಗಳಲ್ಲಿ ಮಹಜರು ಪ್ರಕ್ರಿಯೆ ನಡೆದಿದೆ. ಅಲ್ಲದೆ ಶಾರಿಕ್ ತನ್ನ ಶರ್ಟ್ ಮತ್ತು ಪ್ಯಾಂಟ್ ಬದಲಾಯಿಸಿಕೊಂಡ ಸ್ಥಳ, ಆಟೋ ಹತ್ತಿಕೊಂಡ ಜಾಗ ಮತ್ತು ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳ ಇಷ್ಟು ಕಡೆ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ಪಿಎಫ್‌ಐ ವೆಪನ್ ಟ್ರೇನರ್ ಬಂಧನ
ನಿಜಾಮಾಬಾದ್ ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಶಸ್ತ್ರಾಸ್ತ್ರ ತರಬೇತುದಾರನನ್ನು ಬಳ್ಳಾರಿಯಲ್ಲಿ ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗಷ್ಟೇ (ಎನ್‌ಐಎ) ತಿಳಿಸಿತ್ತು.
ಬಂಧಿತ ಆರೋಪಿಯನ್ನು ಆಂಧ್ರ ಪ್ರದೇಶದ ನಂದ್ಯಾಲ್ ಮೂಲದ ಮೊಹಮ್ಮದ್ ಯೂನಸ್ ಅಲಿಯಾಸ್ ಯೂನಸ್(33) ಎಂದು ಗುರುತಿಸಲಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ಮನೆಯನ್ನು ಶೋಧಿಸಿದಾಗ, ಆರೋಪಿ ತನ್ನ ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಪುತ್ರರೊಂದಿಗೆ ತಲೆಮರೆಸಿಕೊಂಡಿದ್ದನು.
ಆರೋಪಿ ಯೂನಸ್ ತಲೆಮರೆಸಿಕೊಳ್ಳಲು ತನ್ನ ಇಡೀ ಕುಟುಂಬವನ್ನು ಆಂಧ್ರ ಪ್ರದೇಶದಿಂದ ಕರ್ನಾಟಕದ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶಕ್ಕೆ ಸ್ಥಳಾಂತರಿಸಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿತ್ತು.
ಯೂನಸ್ ಶಸ್ತ್ರಾಸ್ತ್ರ ತರಬೇತುದಾರನಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಪಿಎಫ್‌ಐನಿಂದ ನೇಮಕಗೊಂಡ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದನು ಮತ್ತು ಈ ಎರಡು ರಾಜ್ಯಗಳಿಗೆ ರಾಜ್ಯ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ. ಎನ್‌ಐಎ ವಿಚಾರಣೆಯ ವೇಳೆ ಯೂನಸ್, ಪಿಎಫ್‌ಐ ಶಸ್ತ್ರಾಸ್ತ್ರ ತರಬೇತಿ ವಿಚಾರಕ್ಕೆ ಸಂಬಂಧಿಸಿದಂತೆ ಶೇಖ್ ಇಲ್ಯಾಸ್ ಅಹ್ಮದ್ ಎಂಬಾತನ ಹೆಸರು ಹೇಳಿದ್ದು, ಇಲ್ಯಾಸ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿತ್ತು.
ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ಉದ್ದೇಶದೊಂದಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ನಿರ್ವಹಿಸಲು ಯುವಕರನ್ನು ನೇಮಿಸಿಕೊಳ್ಳಲು ಮತ್ತು ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ನಿಷೇಧಿತ ಸಂಘಟನೆ ಪಿಎಫ್‌ಐನ ನಾಯಕರು ಮತ್ತು ಕಾರ್ಯಕರ್ತರು ನಡೆಸಿದ ಕ್ರಿಮಿನಲ್ ಪಿತೂರಿಗೆ ಈ ಪ್ರಕರಣವು ಸಂಬಂಧಿಸಿದೆ ಎನ್ನಲಾಗಿದೆ. ನಿಜಾಮಾಬಾದ್ ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಶಸ್ತ್ರಾಸ್ತ್ರ ತರಬೇತುದಾರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಆರೋಪಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದರು.












Click it and Unblock the Notifications