ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ ಮಂಗಳೂರಿನ ಮತ್ತಷ್ಟು ಕ್ರೈಸ್ತ ಧರ್ಮ ಗುರುಗಳು!
ಮಂಗಳೂರು, ಆಗಸ್ಟ್ 20: ತಾಲಿಬಾನ್ ವಶವಾಗಿರುವ ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ಮಂಗಳೂರು ಮೂಲದ ಜನರು ಸಿಲುಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಂಗಳೂರು ಮೂಲದ ಕ್ರೈಸ್ತ ಸನ್ಯಾಸಿನಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ವರದಿಯಾಗಿದೆ.
ಮಂಗಳೂರಿನಿಂದ ಮೂರು ವರ್ಷಗಳ ಹಿಂದೆ ವಿಶೇಷ ಚೇತನ ಮಕ್ಕಳ ಆರೈಕೆ ಮಾಡಲು ಅಪ್ಘಾನಿಸ್ತಾನಕ್ಕೆ ತೆರಳಿದ್ದ 50 ವರ್ಷದ ಸಿಸ್ಟರ್ ಥೆರೆಸಾ ಕ್ರಾಸ್ತಾ ಕಾಬೂಲಿನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಇಟಲಿ ಮೂಲದ ಎನ್‌ಜಿಓ ಒಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಥೆರೆಸಾ ಕ್ರಾಸ್ತಾ, ಮೂರು ವರ್ಷಗಳ ಹಿಂದೆ ಅಪ್ಘಾನಿಸ್ತಾನದ ರಾಜಧಾನಿ ಕಾಬೂಲಿಗೆ ತೆರಳಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಬೇಲ ನಿವಾಸಿಯಾಗಿರುವ ಥೆರೆಸಾ ಕ್ರಾಸ್ತಾ ಈ ಹಿಂದೆ ನೆಲ್ಯಾಡಿಯ ಕಾನ್ವೆಂಟ್ ಒಂದರಲ್ಲಿ ನರ್ಸ್ ಆಗಿದ್ದರು. ಬಳಿಕ ಜಪ್ಪು ಪ್ರಶಾಂತ ನಿವಾಸ ಆಶ್ರಮದಲ್ಲಿ ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಮಂಗಳೂರಿನ ಸಿಸ್ಟರ್ ಆಫ್ ಚಾರಿಟಿಯಲ್ಲಿದ್ದ ಥೆರೆಸಾ ಕ್ರಾಸ್ತಾರಿಗೆ ಇಟಲಿ ಎನ್‌ಜಿಓದಿಂದ ಕರೆ ಬಂದ ಕಾರಣ ಮೂರು ವರ್ಷಗಳ ಹಿಂದೆ ತೆರಳಿದ್ದರು.

ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ
ಥೆರೆಸಾ ಕ್ರಾಸ್ತಾರಿಗೆ ಕಾಬೂಲಿನಲ್ಲಿ ವಿಶೇಷ ಚೇತನ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಇತರ ಪಾಕಿಸ್ತಾನಿ ಮೂಲದ ಸಿಸ್ಟರ್‌ಗಳ ಜೊತೆ ಥೆರೆಸಾ ಅಲ್ಲಿದ್ದರು. ಆದರೆ, ಈಗ ತಾಲಿಬಾನಿಗಳು ಅಲ್ಲಿನ ಸರಕಾರವನ್ನು ಕಿತ್ತೊಗೆದು ಅಧಿಕಾರಕ್ಕೇರುತ್ತಿದ್ದಂತೆ, ಅವರೀಗ ಮರಳಿ ಬರಲಾಗದೆ ಸಿಲುಕಿಕೊಂಡಿದ್ದಾರೆ. ಕಾಬೂಲ್‌ನ ವಿಮಾನ ನಿಲ್ದಾಣದ ಬಳಿಯಲ್ಲೇ ಸಿಸ್ಟರ್ ಥೆರೆಸಾ ಕ್ರಾಸ್ತಾ ಇದ್ದ ಕ್ಯಾಂಪ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆಶ್ರಮದಿಂದ ಹೊರಗೆ ಬರುವಂತೆ ಇಲ್ಲ
ಆದರೆ, ಸದ್ಯದ ಪರಿಸ್ಥಿತಿಯ ಸಂದರ್ಭದಲ್ಲಿ ಆಶ್ರಮದಿಂದ ಹೊರಗೆ ಬರುವಂತೆ ಇಲ್ಲ. ಹೊರಗೆ ಏನಾಗುತ್ತಿದೆ ಎಂದು ನೋಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ ಅಂತಾ ಮಂಗಳೂರಿನಲ್ಲಿರುವ ಸಹ ಕ್ರೈಸ್ತ ಸನ್ಯಾಸಿನಿಯವರ ಜೊತೆಗೆ ಮಾಹಿತಿ ನೀಡಿದ್ದಾರೆ.
30 ಜನ ಅನಾಥ ವಿಶೇಷ ಚೇತನ ಮಕ್ಕಳ ರಕ್ಷಣೆ ಮತ್ತು ಪಾಲನೆಯ ಹೊಣೆ ಹೊತ್ತಿರುವ ಥೆರೆಸಾ ಕ್ರಾಸ್ತಾ ಅಲ್ಲಿಂದ ಹೇಗೆ ಬರುವುದು ಎನ್ನುವ ಚಿಂತೆಯಲ್ಲಿದ್ದಾರೆ. ಥೆರೆಸಾ ಕ್ರಾಸ್ತಾ ಇರುವ ಕಟ್ಟಡದ ಹೊರಭಾಗದಲ್ಲಿ ಮಿಲಿಟರಿ ಸೆಕ್ಯುರಿಟಿ ಇದೆ. ಹಾಗಾಗಿ ಹೊರಗೆ ಹೋಗುವುದು ಸಾಧ್ಯವಿಲ್ಲ ಮತ್ತು ತಾಲಿಬಾನಿಗಳು ಆಶ್ರಮ ಪ್ರವೇಶಿಸಲು ಸಾಧ್ಯವಿಲ್ಲ. ಸದ್ಯದ ಮಾಹಿತಿಯ ಪ್ರಕಾರವಾಗಿ ಥೆರೆಸಾ ಕ್ರಾಸ್ತಾ ಸುರಕ್ಷಿತವಾಗಿದ್ದು, ಇಟಲಿ ಎನ್‌ಜಿಓ ಅವರನ್ನು ನೋಡಿಕೊಳ್ಳುತ್ತಿದ್ದು, ಸುರಕ್ಷಿತವಾಗಿ ಇಟಲಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದೆ.

ಅಫ್ಘಾನಿಸ್ತಾನ ಚಿತ್ರಣವೇ ಬದಲಾಗಿದೆ
ಇನ್ನು ಉಡುಪಿ ಜಿಲ್ಲೆಯ ಹಲವು ಮಂದಿ ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿದ್ದಾರೆ. ಅಫ್ಘಾನಿಸ್ತಾನದ ಕರಾಳತೆ ಬಿಚ್ಚಿಟ್ಟ ಉಡುಪಿಯ ಮಲ್ಪೆ ನಿವಾಸಿ ಜಾನ್, ತಾಲಿಬಾನಿಗಳ ರಾಕ್ಷಸತನದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾರೆ.
ಕಾಬೂಲ್‌ನಲ್ಲಿ ಇದ್ದ ಪೆಟ್ರೊಲಿಯಂ ಕಂಪನಿಯ ಬ್ರಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದ ಜಾನ್, ವಿಮಾನ ಹತ್ತಿದ ಅರ್ಧ ಗಂಟೆಯೊಳಗೆ ಕಾಬೂಲ್‌ನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಾನ್, "ಉಗ್ರರು ಕಾಬೂಲಿಗೆ ಬರುವ ಸಾಧ್ಯತೆ ಇಲ್ಲ ಎಂದು ನಂಬಿದ್ದೆವು. ವಿಮಾನದಲ್ಲಿ ಕುಳಿತು ಅರ್ಧ ಗಂಟೆಯ ಒಳಗೆ ಅಫ್ಘಾನಿಸ್ತಾನ ಚಿತ್ರಣವೇ ಬದಲಾಗಿದೆ. ನಾವು ವಿಮಾನ ಹತ್ತಿದ ಅರ್ಧ ಗಂಟೆಯಲ್ಲೇ ಅಲ್ಲಿ ಗಲಭೆ ಆರಂಭವಾಗಿದೆ. ದೇವರ ದಯದಿಂದ ನಾವು ಸರಿಯಾದ ಸಮಯದಲ್ಲಿ ಬದುಕಿ ಬಂದೆವು. ದೇವರೇ ನನ್ನನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದಾರೆ," ಎಂದು ಅನಿಸುತ್ತದೆ ಎಂದು ಜಾನ್ ಹೇಳಿದ್ದಾರೆ.
Recommended Video

ಭಾರತೀಯರಿಗೆ ಬಹಳ ಗೌರವ ಕೊಡುತ್ತಾರೆ
"ಅಫ್ಘಾನಿಸ್ತಾನದ ಜನರಿಗೆ ನಾಳೆಯ ಬಗ್ಗೆ ಯೋಚನೆ ಇಲ್ಲ. ಪ್ರತಿ ವಾರದಲ್ಲಿ ಎರಡು ಮೂರು ಬಾಂಬ್ ಸ್ಫೋಟ ಆಗುತ್ತಲೇ ಇರುತ್ತದೆ. ವಾಹನಗಳಲ್ಲಿ ಓಡಾಡುವುದು ಅತ್ಯಂತ ಅಪಾಯಕಾರಿ. ಭಾರತೀಯರಿಗೆ ಬಹಳ ಗೌರವ ಕೊಡುತ್ತಾರೆ. ಉನ್ನತ ಚಿಕಿತ್ಸೆಗೆ ಅವರು ದೆಹಲಿಯನ್ನೇ ಅವಲಂಬಿಸಿದ್ದಾರೆ," ಎಂದರು.
"ಅಫ್ಘಾನಿಸ್ತಾನದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವೇ ಇಲ್ಲ, ಭಾರತದಿಂದ ಔಷಧ ಆಫ್ಘಾನಿಸ್ತಾನಕ್ಕೆ ಸದಾ ರವಾನೆಯಾಗುತ್ತದೆ. ಗಂಭೀರ ಆರೋಗ್ಯ ಪರಿಸ್ಥಿತಿಗಳು ಉಂಟಾದ ಸಂದರ್ಭದಲ್ಲಿ ಆಫ್ಘಾನಿಸ್ತಾನದಿಂದ ದೆಹಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಅಲ್ಲಿ ಭಾರತ ಮತ್ತು ಅಮೆರಿಕ ನಿರ್ಮಾಣ ಮಾಡಿದ ಎಲ್ಲಾ ಮೂಲಭೂತ ಸೌಕರ್ಯಗಳು ಉಗ್ರರ ಪಾಲಾಗಿದೆ. ಅಮೆರಿಕ 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ಮಾಡಿದ ಎಲ್ಲಾ ಸವಲತ್ತುಗಳನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. ಒಂದು ತಿಂಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ," ಎಂದು ಮಾಧ್ಯಮಗಳೆದುರು ಜಾನ್ ಕರಾಳ ಅನುಭವ ಹಂಚಿಕೊಂಡಿದ್ದಾರೆ.












Click it and Unblock the Notifications