ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಹಿಂದೂ ಯುವತಿಯರ ಜೊತೆ ಬಂದಿದ್ದ ಮೂವರು ಮುಸ್ಲಿಂ ಯುವಕರ ಮೇಲೆ ಹಲ್ಲೆ
ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಮಂಗಳೂರಿನ ಸೋಮೇಶ್ವರ ಬೀಚ್ನಲ್ಲಿ ವಿಹಾರಕ್ಕೆಂದು ಬಂದಿದ್ದ ಕೇರಳ ಮೂಲದ ಮೂವರು ಮೂಸ್ಲಿಂ ಯುವಕರ ಮೇಲೆ ತಂಡವೊಂದು ಹಲ್ಲೆ ಮಾಡಿ ನೈತಿಕ ಪೊಲೀಸ್‌ಗಿರಿ ನಡೆಸಿದೆ. ಇನ್ನು ಪ್ರಕರಣ ಸಂಬಂಧ ನಗರದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ಉಚ್ಚಿಲ ನಿವಾಸಿ ಸಚಿನ್, ತಲಪಾಡಿ ನಿವಾಸಿ ಮೋಕ್ಷಿತ್, ಸುಹಾನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

ಕೇರಳದ ಜಾಫರ್ ಶರೀಫ್, ಮುಜೀಬ್, ಆಶಿಕ್ ಎಂಬ ಮೂವರು ಮುಸ್ಲಿಂ ಯುವಕರು ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಬೀಚ್‌ಗೆ ಬಂದಿದ್ದರು ಎಂಬ ಕಾರಣಕ್ಕೆ ಇವರ ಮೇಲೆ ತಂಡವೊಂದು ಹಲ್ಲೆ ಮಾಡಿ ನೈತಿಕ ಪೊಲೀಸ್‌ಗಿರಿ ನಡೆಸಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ ಯುವಕರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಗೊಳಗಾದ ಯುವಕರು ಚೆರ್ಕಳ ಹಾಗೂ ಕಾಸರಗೋಡಿನವರಾಗಿದ್ದು, ಇವರ ಜೊತೆ ಬಂದಿದ್ದ ಯುವತಿಯರು ಮಂಗಳೂರಿನ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಈ ಮೂವರು ವಿದ್ಯಾರ್ಥಿನಿಯರು ಕೇರಳಕ್ಕೆ ವಾಪಾಸ್ ತೆರಳಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications