RSS ಕಚೇರಿಯಲ್ಲಿ ಸರಕಾರೀ ಕಾರ್ಯಕ್ರಮ:ಸಚಿವರ ಗೈರು
ಮಂಗಳೂರು, ಅ 25: ಕೇಂದ್ರ ಸರಕಾರದ ಅಧೀನಕ್ಕೆ ಒಳಪಡುವ ಇಎಸ್ಐಸಿ (Employees State Insurance Corporation) ಸಂಸ್ಥೆಯ ಕಾರ್ಯಕ್ರಮ ರಾಷ್ತ್ರೀಯ ಸ್ವಯಂಸೇವಕ ಸಂಘದ ಕಚೇರಿಯಲ್ಲಿ ನಡೆದಿದ್ದುದರಿಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಅಲ್ಲದೇ, ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಜೆ ಆರ್ ಲೋಬೋ, ಇಬ್ಬರು ಸಚಿವರುಗಳಾದ ರಮಾನಾಥ್ ರೈ ಮತ್ತು ಯು ಟಿ ಖಾದರ್ ಕೂಡಾ ಬೇರೆ ಬೇರೆ ಕಾರಣಗಳನ್ನು ನೀಡಿ ಗೈರಾಗಿದ್ದರು.
RSS ಕಾರ್ಯಾಲಯವೂ ಆಗಿರುವ ಇಲ್ಲಿನ ಸಂಘನಿಕೇತನದ ಸುಂದರ ಸಭಾಂಗಣದಲ್ಲಿ ಇಎಸ್ಐಸಿ ಉಪವಿಭಾಗ ಕಚೇರಿ ಉದ್ಘಾಟನೆಯ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕಾರ್ಯಕ್ರಮ ಈ ಸಭಾಂಗಣದಲ್ಲಿ ಆಯೋಜಿಸಿದ್ದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಕೇಂದ್ರ ಕಾರ್ಮಿಕ ಸಚಿವ ಕೆ ಸುರೇಶ್ ಮತ್ತು ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಎದುರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು.
ಕಾರ್ಯಕ್ರಮ ಆಯೋಜಿಸಿದ ಅಧಿಕಾರಿಗಳು ನವದೆಹಲಿಯಲ್ಲಿ ಸಂಸದರ ಜೊತೆ ಮಾತುಕತೆ ನಡೆಸಿ ಸ್ಥಳ ಅಂತಿಮ ಗೊಳಿಸಿರಬಹುದು. ಕೇಂದ್ರ ಕಾರ್ಮಿಕ ಸಚಿವರು ಕೇರಳದವರಾಗಿರುವುದರಿಂದ ಈ ಸಭಾಂಗಣದ ಬಗ್ಗೆ ಅವರಿಗೆ ಅರಿವು ಇಲ್ಲದಿರಬಹುದು.
ಇದು ಕೇಂದ್ರ ಸರಕಾರದ ಕಾರ್ಯಕ್ರಮ, ನಾವು ಈ ಕಾರ್ಯಕ್ರಮಕ್ಕೆ ಅಡ್ಡಿ ಮಾಡಬಾರದು ಎಂದು ಸಚಿವರು ಮತ್ತು ಅಧಿಕಾರಿಗಳು ಕಾರ್ಯಕರ್ತರ ಮನವೊಲಿಸಿ ಸಮಾಧಾನಗೊಳಿಸಿದರು.
ಮಂಗಳೂರಿನಲ್ಲಿ ಇಎಸ್ಐ ಕಚೇರಿ: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಮಂಗಳೂರಿನಲ್ಲಿ ರಾಜ್ಯದ ಆರನೇ ಉಪವಿಭಾಗ ಕಚೇರಿ ಗುರುವಾರದಿಂದ (ಅ 24) ಕಾರ್ಯಾರಂಭವಾಗಿದೆ.
ನಗರದ ನವಭಾರತ್ ವೃತ್ತದಲ್ಲಿ ಈ ಕಚೇರಿ ಆರಂಭವಾಗಿದ್ದು, ಬೈಕಂಪಾಡಿ, ಉಡುಪಿ ಮತ್ತು ಮಂಗಳೂರು ನಗರ ಶಾಖೆಗಳು ಈ ಉಪವಿಭಾಗದ ವ್ಯಾಪ್ತಿಗೆ ಬರಲಿದೆ.











Click it and Unblock the Notifications