ಹೇರ್ ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ; ಮಂಗಳೂರಲ್ಲಿ ಸಿಕ್ಕ ಖದೀಮ!
ಮಂಗಳೂರು, ಆಗಸ್ಟ್ 22; ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವರ್ಷದಲ್ಲಿ ಅತೀ ಹೆಚ್ಚು ಸುದ್ದಿಯಾಗೋದು ಅಕ್ರಮ ಚಿನ್ನ ಸಾಗಾಣಿಕೆ ವಿಚಾರವಾಗಿ. ಚಿನ್ನವನ್ನು ಈ ರೀತಿಯೂ ಸಾಗಿಸಬಹುದಾ? ಅಂತಾ ಅಂದುಕೊಳ್ಳುವಷ್ಟು ರೀತಿಯಲ್ಲಿ ಚಿನ್ನ ಸಾಗಾಟ ಮಾಡಲಾಗುತ್ತದೆ.
ದೇಹದ ಎಲ್ಲಾ ಅಂಗಾಂಗಗಳಲ್ಲೂ ಚಿನ್ನ ಇಟ್ಟವರು, ಚಿನ್ನವನ್ನು ನುಂಗಿ ಕೊಂಡು ಬಂದವರು, ಚಿನ್ನವನ್ನು ವಿವಿಧ ಆಕಾರದಲ್ಲಿ ತಂದವರು, ಎಲ್ಲರೂ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಲೇ ಇದ್ದಾರೆ.
ಆದರೆ ಈ ಬಾರಿ ಖತರ್ನಾಕ್ ವ್ಯಕ್ತಿಯೊಬ್ಬ ದುಬೈನಿಂದ ಚಿನ್ನವನ್ನು ಕೊಂಚ ಡಿಫೆರೆಂಟ್ ಆಗಿಯೇ ತಂದಿದ್ದಾನೆ. ಆದರೆ ಗ್ರಹಚಾರ ಸರಿ ಇರಲಿಲ್ಲ ಅನ್ನಿಸುತ್ತದೆ. ಚಿನ್ನ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿದೆ. ಈ ಬಾರಿ ಚಿನ್ನ ಸಾಗಾಟವಾಗಿದ್ದು ಮಹಿಳೆಯರು, ಮಕ್ಕಳು ಬಳಸುವ ಹೇರ್ ಬ್ಯಾಂಡ್ ನಲ್ಲಿ. ಹೇರ್ ಬ್ಯಾಂಡ್‌ನಲ್ಲಿ ಹೇಗಪ್ಪಾ ಚಿನ್ನ ಸಾಗಿಸೋದು? ಅಂತಾ ಯೋಚನೆ ಮಾಡ್ತಿದ್ದೀರಾ?.
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ವ್ಯಕ್ತಿ ಮಾತ್ರ ಹೇಗಾದರೂ ಸರಿ ಈ ಬಾರಿ ಚಿನ್ನವನ್ನು ಊರ ದಾರಿ ತೋರಿಸಲೇಬೇಕೆಂದು ನಿರ್ಧಾರ ಮಾಡಿದ್ದ. ಆಗ ಆತನಿಗೆ ಹೊಳೆದಿದ್ದು ಈ ಯೂನಿಕ್ ಐಡಿಯಾ. ಆದರೆ ಅದು ಸಹ ಈಗ ವಿಫಲವಾಗಿದೆ.

ಹೇರ್ ಬ್ಯಾಂಡ್ ಒಳಗೆ ಚಿನ್ನದ ತಂತಿ
ಐದು ಹೇರ್ ಬ್ಯಾಂಡ್ ತೆಗೆದುಕೊಂಡು ನೀಟಾಗಿ ಬ್ಯಾಂಡ್‌ಗಳನ್ನು ಸೂಕ್ಷ್ಮವಾಗಿ ಇಬ್ಬಾಗ ಮಾಡಿದ್ದಾನೆ. ಬ್ಯಾಂಡ್ ನಡುವೆ ತಂತಿ ರೂಪದಲ್ಲಿ ಚಿನ್ನವನ್ನು ಅಳಸಡಿಸಲಾಗಿದೆ. ಬಳಿಕ ಅಷ್ಟೇ ನಾಜೂಕಾಗಿ, ಅನುಮಾನವೇ ಬಾರದಂತೆ ಮತ್ತೆ ಜೋಡಣೆ ಮಾಡಿದ್ದಾನೆ.
ಆಗಸ್ಟ್ 21ರಂದು ಮುಂಜಾನೆ ದುಬೈನಿಂದ ಮಂಗಳೂರಿಗೆ ತೆರಳುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹತ್ತಿದ್ದ. ವ್ಯಕ್ತಿಯ ಲೆಕ್ಕಾಚಾರದಂತೇ ಮಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗಿದೆ, ಕಸ್ಟಮ್ ಅಧಿಕಾರಿಗಳ ತಪಾಸಣೆಗೆ ಸಹ ಒಳಗಾಗಿದ್ದಾನೆ.

115 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದ ಸಿಬ್ಬಂದಿ
ಎಲ್ಲವೂ ಅಂದುಕೊಂಡತೇ ಆಗಿದ್ದರೆ, ಮುರುಡೇಶ್ವರದ ವ್ಯಕ್ತಿ ಆರಾಮಾಗಿ ವಿಮಾನ ನಿಲ್ದಾಣದಿಂದ ಹೊರಬಂದು ಊರು ಸೇರುತ್ತಿದ್ದನೇನೋ. ಆದರೆ ಗ್ರಹಚಾರ ಅನ್ನೋದು ನಡು ದಾರಿಯಲ್ಲೇ ವಕ್ಕರಿಸಿದೆ ಕಸ್ಟಮ್ ಅಧಿಕಾರಿಗಳ ಅತ್ಯಾಧುನಿಕವಾದ ತಂತ್ರಜ್ಞಾನ ದ ತಪಾಸಣೆ ಯಿಂದ ಚಿನ್ನ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಕೂಡಲೇ ಹೇರ್ ಬ್ಯಾಂಡ್ ಸೀಳಿದ ಕಸ್ಟಮ್ ಅಧಿಕಾರಿಗಳ ತಂಡ ಹೇರ್ ಬ್ಯಾಂಡ್ ನಡುವಿನಿಂದ 115 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ. ಇದರ ಒಟ್ಟು ಮೌಲ್ಯ 5,58,900 ರೂಪಾಯಿಗಳು ಅಂತಾ ಅಂದಾಜಿಸಲಾಗಿದೆ.

ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾರಕ್ಕೆ ಕನಿಷ್ಠ 5 ಅಕ್ರಮ ಚಿನ್ನ ಸಾಗಾಟದ ಪ್ರಕರಣ ದಾಖಲಾಗುತ್ತಿದ್ದು, ಭಾರೀ ಭದ್ರತೆಯ ನಡುವೆಯೂ ಚಿನ್ನ ಸಾಗಾಟಕ್ಕೆ ಪ್ರಯತ್ನಗಳು ನಡೆಯುತ್ತಲೇ ಇದೆ. ಪ್ರತಿ ಸಲವೂ ಅಕ್ರಮ ಚಿನ್ನ ಸಾಗಾಟಗಾರರು ಸಿಕ್ಕಿ ಬೀಳುತ್ತಿದ್ದರೂ, ಮತ್ತೆ ಮತ್ತೆ ಪ್ರಕರಣಗಳು ಮರುಕಳಿಸುತ್ತಿರೋದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ದಂಧೆಯಲ್ಲಿ ಕೆಲ ಕಸ್ಟಮ್ಸ್ ಅಧಿಕಾರಿಗಳು ಭಾಗಹಿಸಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ನಿರಂತರವಾಗಿ ಅಕ್ರಮ ಚಿನ್ನ ಸಾಗಾಟ ಪ್ರಯತ್ನಗಳು ನಡೆಯುತ್ತಿದ್ದು, ಈ ಮಾಫಿಯಾದ ಹಿಂದೆ ದೊಡ್ಡ ದಂಧೆ ಇರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ.

ಪ್ರಯಾಣಿಕರಿಗೆ ಹಣದ ಆಮಿಷ
ದುಬೈಯಲ್ಲಿರುವ ದಂಧೆ ಕೋರರು ಭಾರತದಲ್ಲಿರುವ ದಂಧೆ ಕೋರರಿಗೆ ಚಿನ್ನ ತಲುಪಿಸಲು ವಿಮಾನ ಪ್ರಯಾಣಿಕರನ್ನು ಬಳಸುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ವಿಮಾನ ಪ್ರಯಾಣಿಕರಿಗೆ ಹಣದ ಆಮಿಷ ತೋರಿಸಿ ಚಿನ್ನ ಸಾಗಾಟಕ್ಕೆ ಪ್ರಯತ್ನ ನಡೆಸುತ್ತಿರುವ ಸಾಧ್ಯತೆಗಳೂ ಇದೆ. ಈ ಚಿನ್ನ ಸಾಗಾಟದಲ್ಲಿ ಈ ಹಿಂದೆ ಕೇರಳದ ನಿವಾಸಿಗಳೇ ಅಧಿಕವಾಗಿದ್ದರು. ಆದರೆ ಕೇರಳದ ಕೊಚ್ಚಿಯಲ್ಲಿ ನೂತನ ವಿಮಾನ ನಿಲ್ದಾಣವಾಗಿದ್ದರಿಂದ ಕೇರಳದ ಪ್ರಯಾಣಿಕರೆಲ್ಲರೂ ಕೊಚ್ಚಿಯತ್ತ ಮುಖ ಮಾಡಿದ್ದಾರೆ. ಸದ್ಯ ಕರ್ನಾಟಕ ಮತ್ತು ಕೇರಳದ ಗಡಿ ಭಾಗಕ್ಕೆ ತೆರಳುವ ಪ್ರಯಾಣಿಕರನ್ನು ಉಪಯೋಗಿಸಿ ಈಗ ಚಿನ್ನ ಸಾಗಾಟ ನಡೆಯುತ್ತಿರೋದಾಗಿ ವಿಮಾನ ನಿಲ್ದಾಣದ ಮಾಜಿ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications