Republic Day Parade: ನೌಕಾದಳವನ್ನು ಮುನ್ನಡೆಸಲಿರುವ ಮಂಗಳೂರಿನ ದಿಶಾ ಅಮೃತ್
ಮಂಗಳೂರು, ಜನವರಿ 21: ದೇಶದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈ ಬಾರಿಯೂ ನಾರಿ ಶಕ್ತಿ ಮೇಳೈಸಲಿದೆ. ಕರ್ತವ್ಯ ಪಥದಲ್ಲಿ ನಡೆಯಲಿರುವ ಸೇನಾ ಪಡೆಗಳ ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ನೌಕಾದಳವನ್ನು ಮಂಗಳೂರು ಮೂಲದ ನೇವಿ ಅಧಿಕಾರಿ ಮುನ್ನಡೆಸಲಿದ್ದಾರೆ. ಭಾರತೀಯ ನೌಕಾಪಡೆಯ ಲೆಪ್ಟಿನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಗಣರಾಜ್ಯೋತ್ಸವ ಫೆರೇಡ್‌ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ.
ರಾಜಪಥ ಕರ್ತವ್ಯಪಥವಾಗಿ ಬದಲಾದ ಬಳಿಕ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪಥಸಂಚಲನ ನಡೆಯಲಿದ್ದು, ದೇಶದ ನೌಕಾದಳವನ್ನು ಮಂಗಳೂರಿನ ನಾರಿ ಮುನ್ನಡೆಸೋದು ಬಹಳ ವಿಶೇಷವಾಗಿದೆ. ಗಣರಾಜ್ಯೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಸೇನಾ ತುಕಡಿಗಳ ಪರೇಡ್ ಅಥವಾ ಪಥಸಂಚಲನಲ್ಲಿ ಪಾಲ್ಗೊಳ್ಳುವುದೇ ಸೇನಾ ಸಿಬಂದಿಗಳಿಗೆ ಹೆಮ್ಮೆಯಾಗಿದೆ. ಅದರಲ್ಲೂ ನೌಕಾಪಡೆಯ ತಂಡವನ್ನು ಮುನ್ನಡೆಸುವುದಕ್ಕೆ ದಿಶಾ ಅಮೃತ್ ಅವರು ಆಯ್ಕೆಯಾಗಿದ್ದಾರೆ.
ದಿಶಾ ಅಮೃತ್ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿ ಪುತ್ರಿ. ಅವರಿಗೆ ನೌಕಾ ಪಡೆಯ ಅಧಿಕಾರಿಯಾಗಬೇಕು ಎಂಬ ಆಸೆ ಬಾಲ್ಯದಲ್ಲಿಯೇ ಇತ್ತು. ಈ ನಿಟ್ಟಿನಲ್ಲಿ ಎಂಟನೇ ತರಗತಿಯಿಂದಲೇ ಎನ್‌ಸಿಸಿಯಲ್ಲಿ ತೊಡಗಿಸಿಕೊಂಡಿದ್ದರು. ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಹೊಸದಿಲ್ಲಿಯ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾಗಿದ್ದರು.

ದಿಶಾ ಅವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ನಗರದ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಆಗ ಕೆನರಾ ಕಾಲೇಜಿನಲ್ಲಿ ಎನ್‌ಸಿಸಿ ಇಲ್ಲದ ಕಾರಣ ಅಲೋಶಿಯಸ್ ಎನ್‌ಸಿಸಿಯ ಘಟಕದಲ್ಲಿ ತರಬೇತಿ ಪಡೆಯುತ್ತಿದ್ದರು. ಆಗಲೂ ಅವರಿಗೆ ಸೇನಾಪಡೆಗಳಿಗೆ ಅಧಿಕಾರಿಯಾಗುವ ಹಂಬಲವಿತ್ತು. ಬಳಿಕ ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತಿದ್ದಾರೆ. ಆ ವೇಳೆಗಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸುತ್ತಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಪ್ರಯತ್ನ ಕೈಬಿಡದೆ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸದ್ಯ ನೌಕಾಪಡೆಯಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಲೆಪ್ಟಿನೆಂಟ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಮುನ್ನಡೆಸುವ ನಿಟ್ಟಿನಲ್ಲಿ ನವೆಂಬರ್9 ಮತ್ತು 10 ರಂದು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆಯ್ಕೆಯಾದ ಬಳಿಕ ನವೆಂಬರ್ 18ರಿಂದ ತರಬೇತಿ ನೀಡಲಾಗುತ್ತಿದೆ.
ಮಗಳ ಸಾಧನೆಗೆ ದಿಶಾ ಅಮೃತ್ ಹೆತ್ತವರು ಖುಷಿ ವ್ಯಕ್ತಪಡಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ದಿಶಾ ತಂದೆ ಅಮೃತ್, "ನಮ್ಮ ಆಸೆ ಮಗಳು ಈಡೇರಿಸಿದಳು ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಮಗಳು ದಿಶಾ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನೇವಿ ತುಕಡಿ ಮುನ್ನಡೆಸಲು ಆಯ್ಕೆಯಾಗಿದ್ದು ಸಂತಸ ತಂದಿದೆ. ನೌಕಾಪಡೆಯ ಬಗ್ಗೆ ನನಗೆ ಮತ್ತು ಪತ್ನಿಗೆ ವಿಶೇಷ ಆಸಕ್ತಿ ಇದೆ. ಆದರೆ, ಆ ಕಾಲದಲ್ಲಿ ನಮಗೆ ಕಲಿಯಲು ಸಾಧ್ಯವಾಗಿಲ್ಲ. ಇದೀಗ ನಮ್ಮ ಆಸೆಯನ್ನು ಮಗಳು ಈಡೇರಿಸಿದ್ದಾಳೆ" ಎಂದು ಖುಷಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications