ದಕ್ಷಿಣ ಕನ್ನಡದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿ:ಐವನ್ ಡಿಸೋಜಾ
ಮಂಗಳೂರು, ಜನವರಿ 25: ಸಕ್ರೀಯ ರಾಜಕಾರಣಕ್ಕೆ ಬಂದಿರುವ ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡದಿಂದ ಸ್ಪರ್ಧಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕರೆ ನೀಡಿದ್ದಾರೆ.
ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶಿಸಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಅವರು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿ ಗೆದ್ದು ಬಂದಿದ್ದರು. ಇದೀಗ ರಾಜಕೀಯ ಪ್ರವೇಶಿಸಿರುವ ಪ್ರಿಯಾಂಕ ಗಾಂಧಿಯವರು ಮಂಗಳೂರಿನಿಂದ ಸ್ಪರ್ಧಿಸಲಿ ಎಂದು ಆಹ್ವಾನ ನೀಡಿದರು.
ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶ ಬಿಜೆಪಿಗೆ ದಿಗಿಲು ಮೂಡಿಸಿದೆ. ಬಿಜೆಪಿ ನಾಯಕರಿಗೆ ಈಗ ನೀರಿನಿಂದ ತೆಗೆದ ಮೀನಿನಂಥ ಅನುಭವವಾಗಿದೆ. ಪ್ರಿಯಾಂಕಾ ಅವರ ಆಗಮನದ ಬಗ್ಗೆ ಬಿಜೆಪಿ ನಾಯಕರು ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಈಗಾಗಲೇ ಟಿಕೆಟ್ ಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಈ ನಡುವೆ ಟಿಕೆಟ್ ಗಾಗಿ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ, ಬಿ ಕೆ ಹರಿಪ್ರಸಾದ್, ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಲಾಬಿ ಆರಂಭಿಸಿದ್ದಾರೆ. ಈ ಎಲ್ಲದರ ಮಧ್ಯೆ ಖುದ್ದು ಟಿಕೆಟ್ ಆಕಾಂಕ್ಷಿಯಾಗಿರುವ ಐವನ್ ಡಿಸೋಜಾ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.












Click it and Unblock the Notifications