ಆದಾಯ ಕಡಿಮೆ, ಕುಕ್ಕೆ ಸುಬ್ರಮಣ್ಯದ ಶ್ರೀಮಂತ ದೇವಾಲಯ ಪಟ್ಟಕ್ಕಿಲ್ಲ ಧಕ್ಕೆ
ಮಂಗಳೂರು, ಜೂನ್ 06 : ಕರ್ನಾಟಕದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಮಣ್ಯದ ಆದಾಯದಲ್ಲಿ ಇಳಿಕೆ ಕಂಡುಬಂದಿದೆ. ಆದಾಯ ಕಡಿಮೆಯಾದರೂ ಶ್ರೀಮಂತ ದೇವಾಲಯ ಎಂಬ ಪಟ್ಟಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.
2018-19 ನೇ ಸಾಲಿನಲ್ಲಿ ಕುಕ್ಕೆ ಸುಬ್ರಮಣ್ಯ ದೇವಾಲಯದ ಆದಾಯ 92,09,13,824 ರೂ.ಗಳಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದೇವಾಲಯದ ಆದಾಯ 3.83 ಕೋಟಿ ಕುಸಿತವಾಗಿದೆ. ಆದರೂ ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಮಣ್ಯ.
ಪ್ರತಿನಿತ್ಯ ಸಾವಿರಾರು ಭಕ್ತರು ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡುತ್ತಾರೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆಗಳನ್ನು ಮಾಡಿಸುತ್ತಾರೆ. ವರ್ಷದಿಂದ ವರ್ಷಕ್ಕೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ.
2007-08ರಲ್ಲಿ 24.44 ಕೋಟಿ ಆದಾಯ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಬಂದಿತ್ತು. ಆಗ ದೇವಾಲಯ ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಗೆ ಸೇರಿತು. ವರ್ಷದಿಂದ ವರ್ಷಕ್ಕೆ ದೇವಾಲಯದ ಆದಾಯ ಹೆಚ್ಚಾಗುತ್ತಲೇ ಇದೆ. ಆದಾಯದ ವಿಚಾರದಲ್ಲಿ ರಾಜ್ಯದ ನಂ.1 ದೇವಾಲಯವಾಗಿದೆ.....

ಕುಕ್ಕೆ ಸುಬ್ರಮಣ್ಯದ ಆದಾಯ
2018ರ ಏಪ್ರಿಲ್‌ನಿಂದ 2019ರ ಮಾರ್ಚ್ 31ರ ತನಕ ಕುಕ್ಕೆ ಸುಬ್ರಮಣ್ಯ ದೇವಾಲಯ 92,09,13,824 ರೂ. ಆದಾಯಗಳಿಸಿದೆ. ದೇವಸ್ಥಾನದ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ, ಕೃಷಿ ತೋಟಗಳಿಂದ 92.09 ಕೋಟಿ ಆದಾಯ ಬಂದಿದೆ.

ಕುಸಿತ ಕಂಡ ಆದಾಯ
ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ 2017-18ರ ಸಾಲಿನಲ್ಲಿ 95,92,54,363 ರೂ. ಆದಾಯ ಬಂದಿತ್ತು. ಈ ವರ್ಷ 3.83 ಕೋಟಿ ಆದಾಯ ಕಡಿಮೆಯಾಗಿದೆ. 2018ರ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ದೇವಾಲಯಕ್ಕೆ ಭಕ್ತರ ಸಂಖ್ಯೆ ಕಡಿಮೆ ಆಗಿತ್ತು. ಆದ್ದರಿಂದ, ಆದಾಯ ಕಡಿಮೆಯಾಗಿದೆ ಎಂದು ಶಂಕಿಸಲಾಗಿದೆ.

ಶ್ರೀಮಂತ ದೇವಾಲಯಗಳ ಪಟ್ಟಿ ಸೇರಿತು
2006-07ರಲ್ಲಿ ಕುಕ್ಕೆ ಸುಬ್ರಮಣ್ಯ ದೇವಾಲಯದ ಆದಾಯ 19.76 ಕೋಟಿ ಇತ್ತು. 2007-08ರಲ್ಲಿ 24.44 ಕೋಟಿ ಆದಾಯದೊಂದಿಗೆ ಶ್ರೀಮಂತ ದೇವಾಲಯಗಳ ಪಟ್ಟಿ ಸೇರಿತು. ಪ್ರಸ್ತುತ ದೇವಾಲಯ ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ನಂಬರ್ 1. ಈ ವರ್ಷ ಆದಾಯ ಕಡಿಮೆಯಾದರೂ ಶ್ರೀಮಂತ ದೇವಾಲಯದ ಪಟ್ಟಕ್ಕೆ ಧಕ್ಕೆ ಬಂದಿಲ್ಲ.

ವರ್ಷದಿಂದ ವರ್ಷಕ್ಕೆ ಹೆಚ್ಚು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಮಣ್ಯ ದೇವಾಲಯದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.
* 2009-10ರಲ್ಲಿ 38.51 ಕೋಟಿ
* 2011-12ರಲ್ಲಿ 56.24 ಕೋಟಿ
* 2012-13ರಲ್ಲಿ 66.76 ಕೋಟಿ
* 2013-14ರಲ್ಲಿ 68 ಕೋಟಿ
* 2014-15ರಲ್ಲಿ77.60 ಕೋಟಿ
* 2015-16ರಲ್ಲಿ 88.83 ಕೋಟಿ
* 2016-17ರಲ್ಲಿ 89.65 ಕೋಟಿ
* 2017-18ರಲ್ಲಿ 95.92 ಕೋಟಿ ಆದಾಯ ಬಂದಿದೆ.












Click it and Unblock the Notifications