KSRTC: ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಆರಂಭ
ಮಂಗಳೂರು, ಡಿಸೆಂಬರ್ 12: ಪ್ರಯಾಣಿಕರ ಬೇಡಿಕೆಯಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಗುರುವಾರದಿಂದ ಪ್ರಾಯೋಗಿಕವಾಗಿ ಬಸ್ ಸಂಚಾರವನ್ನು ಆರಂಭಿಸಿದೆ. 'ಶಕ್ತಿ' ಯೋಜನೆ ಜಾರಿಗೊಳಿಸಿದ ಬಳಿಕ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರವನ್ನು ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸ ಸಭೆಯಲ್ಲಿಯೂ ಚರ್ಚೆ ನಡೆದಿತ್ತು.
ಜಿಲ್ಲಾಧಿಕಾರಿಗಳು, ಆರ್‌ಟಿಒ, ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿದಂತೆ ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಸಂಚಾರ ಪ್ರಾಯೋಗಿಕವಾಗಿ ಗುರುವಾರ ಆರಂಭವಾಗಿದೆ. ಇದಕ್ಕಾಗಿ ತಾತ್ಕಾಲಿಕ ಒಪ್ಪಿಗೆಯನ್ನು ಆರ್‌ಟಿಒ ಅಧಿಕಾರಿಗಳು ನೀಡಿದ್ದಾರೆ. ಖಾಸಗಿ ಬಸ್ ಪಾರುಪತ್ಯವಿರುವ ದಕ್ಷಿಣ ಕನ್ನಡದಲ್ಲಿ ಈ ಬಸ್ ಸೇವೆಗೆ ಹೇಗೆ ಪ್ರತಿಕ್ರಿಯೆ ಸಿಗಲಿದೆ? ಎಂದು ನೋಡಬೇಕಿದೆ.

4 ತಿಂಗಳ ಕಾಲ ಸಂಚಾರ: ಕೆಎಸ್ಆರ್‌ಟಿಸಿ ತಾತ್ಕಾಲಿಕ ಪರವಾನಿಗೆ ಪಡೆದು ನಾಲ್ಕು ತಿಂಗಳ ಕಾಲ ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಎರಡು ಬಸ್‌ಗಳನ್ನು ಪ್ರಾಯೋಗಿಕವಾಗಿ ಓಡಿಸಲಿದೆ. ಮಂಗಳೂರು ನಗರದ ಬಿಜೈ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಬಸ್ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಸಂಚಾರವನ್ನು ನಡೆಸಲಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಬಸ್ ಓಡಿಸಲು ಪರವಾನಗಿ ನೀಡಬೇಕು ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮನವಿ ಸಲ್ಲಿಕೆ ಮಾಡಿದ್ದರು. ಈ ಪ್ರಸ್ತಾಪಕ್ಕೆ ಖಾಸಗಿ ಬಸ್ ಮಾಲೀಕರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು.
ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದು, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್, ಮಂಗಳೂರು-ಕಾರ್ಕಳ ನಡುವೆ 8 ಟ್ರಿಪ್‌ಗೆ ಬೇಡಿಕೆ ಇದೆ. ಕೇವಲ ಮೂರು ಟ್ರಿಪ್‌ಗೆ ಈಗಾಗಲೇ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು.
ಖಾಸಗಿ ಬಸ್ ಮಾಲೀಕರು ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಿಸಲು ಇರುವ ಪ್ರಸ್ತಾಪಕ್ಕೆ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು 15 ದಿನಗಳ ಕಾಲಾವಕಾಶ ಕೇಳಿದ್ದರು. ಈಗ ಆಕ್ಷೇಪಣೆಗಳನ್ನು ಪಡೆದ ಮೇಲೆ ತಾತ್ಕಾಲಿಕವಾಗಿ ಬಸ್ ಓಡಿಸಲು ಅನುಮೋದನೆ ನೀಡಲಾಗಿದೆ.
ಪ್ರತಿದಿನ ಮಂಗಳೂರು ಕಡೆಯಿಂದ 2, ಕಾರ್ಕಳ ಕಡೆಯಿಂದ 2 ಬಸ್‌ಗಳು ಸದ್ಯಕ್ಕೆ ಸಂಚಾರ ನಡೆಸುವಂತೆ ವೇಳಾಪಟ್ಟಿ ರೂಪಿಸಲಾಗಿದೆ. ಒಂದು ಬಸ್ ದಿನಕ್ಕೆ 7 ಟ್ರಿಪ್ ಸಂಚಾರ ನಡೆಸಲಿದೆ. ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಾರ್ಗದಲ್ಲಿ 8 ಬಸ್‌ಗಳ ಸಂಚಾರಕ್ಕೆ ಅನುಮತಿ ಕೋರಿ 2014ರಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿಗಳ ಸಭೆಯಲ್ಲಿಯೂ ಚರ್ಚೆಯಾಗಿತ್ತು. ಪರ-ವಿರೋಧ ಚರ್ಚೆಗಳು ನಡೆದಿದ್ದವು. ಸದ್ಯ ತಾತ್ಕಾಲಿಕವಾಗಿ ಬಸ್ ಸಂಚಾರ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಪಾರುಪತ್ಯದ ಕುರಿತು ಹಲವು ಸಲ ಚರ್ಚೆಗಳು ನಡೆದಿವೆ. ಆದರೆ ಈಗ 'ಶಕ್ತಿ' ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಪ್ರಯಾಣಿಕರ ಮಂಗಳೂರು-ಕಾರ್ಕಳ ಮಾರ್ಗವಾಗಿ ಸರ್ಕಾರಿ ಬಸ್ ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಇದಕ್ಕೆ ಸಹ ಖಾಸಗಿ ಬಸ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು.
ಸದ್ಯ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿದಂತೆ ಪ್ರಾಯೋಗಿಕವಾಗಿ ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿರಲಿದೆ?. ಈ ಬಸ್‌ಗಳ ಸಂಚಾರ ಶಾಶ್ವತವಾಗಿ ಇರಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications