ಕಾವ್ಯಳಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ, ಬೇಬಿ ಪೂಜಾರಿ ಆರೋಪ
ಮಂಗಳೂರು. ಆಗಸ್ಟ್ 04 : ಕಾವ್ಯ ಆತ್ಮಹತ್ಯೆ ಮಾಡಿಕೊಂಡ ದಿನದಂದು (ಜುಲೈ 20) ಮೂಡಬಿದ್ರೆ ಪೊಲೀಸರು ಮನೆಗೆ ಬಂದು ತನ್ನ ಗಂಡ ಲೋಕೇಶ್ ಅವರಿಗೆ ಸ್ವತಃ ಪೊಲೀಸರೇ ಹೇಳಿಕೊಟ್ಟು ಪತ್ರವನ್ನು ಬರೆಸಿಕೊಂಡಿದ್ದಾರೆ ಎಂದು ಮೃತ ಕಾವ್ಯ ಪೂಜಾರಿ ತಾಯಿ ಬೇಬಿ ಪೂಜಾರಿ ಆರೋಪಿಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಪಣಂಬೂರು ಸಹಾಯಕ ಪೊಲೀಸ್ ಆಯುಕ್ತರ ಸಮಕ್ಷಮ ನೀಡಿರುವ ಹೇಳಿಕೆಯಲ್ಲಿ ಬೇಬಿ ಪೂಜಾರಿ ಈ ಸಂಶಯ ವ್ಯಕ್ತಪಡಿಸಿದ್ದಾರೆ. ಬೇಬಿ ಪೂಜಾರಿ ಅವರ ಹೇಳಿಕೆ ಪತ್ರ ಒನ್ ಇಂಡಿಯಾಕ್ಕೆ ಲಭ್ಯವಾಗಿದೆ.

ತನ್ನ ಮಗಳಾದ ಕಾವ್ಯಳದ್ದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿರುವ ಬೇಬಿ ಪೂಜಾರಿ ತನ್ನ ಮಗಳು ಕಾವ್ಯಗಳನ್ನು ದೈಹಿಕ ಶಿಕ್ಷಕ ಪ್ರವೀಣ್ ಮುಂಜಾನೆ ನಾಲ್ಕು ಗಂಟೆಗೆ ಪ್ರ್ಯಾಕ್ಟಿಸ್ ಗೆ ಕರೆದ ಉದ್ದೇಶವನ್ನು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಕಾವ್ಯಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ನಂತರ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ದೂರಿದ್ದಾರೆ.

ಈ ಪ್ರಕರಣದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ ಹಾಗೂ ಮೂಡಬಿದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಶಾಮೀಲಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಎಲ್ಲಾ ಮಾಹಿತಿಗಳನ್ನು ಮುಂದಿಟ್ಟು ಸಮಗ್ರ ತನಿಖೆ ನಡೆಸುವಂತೆ ಮೃತ ಕಾವ್ಯ ಪೂಜಾರಿ ತಾಯಿ ಬೇಬಿ ಪೂಜಾರಿ ಮಂಗಳೂರು ಪೊಲೀಸ್ ಕಮಿಷನರ್ ಗೆ ಮನವಿ ಮಾಡಿಕೊಂಡರು.












Click it and Unblock the Notifications