ಮಂಗಳೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ: ರಾಜ್ಯ ಸರ್ಕಾರ ನೀಡುತ್ತಿಲ್ಲ ಭೂಮಿ
ಮಂಗಳೂರು, ಫೆಬ್ರವರಿ 10: ಅದಾನಿ ಗ್ರೂಪ್ ನಿರ್ವಹಣೆ ಮಾಡುವ ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡುವ ಪ್ರಸ್ತಾಪವಿದೆ. ಆದರೆ ಈ ಯೋಜನೆಗೆ ಕರ್ನಾಟಕ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಕುರಿತು ಲೋಕಸಭೆಯಲ್ಲಿಯೇ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕರ್ನಾಟಕದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಸಹ ಒಂದಾಗಿದ್ದು, ರಾಜ್ಯದ 2ನೇ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೇಳಿದ್ದ ಪ್ರಶ್ನೆಗೆ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಮರಳೀಧರ್ ಮಹೋಲ್ ಉತ್ತರ ನೀಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಯೋಜನೆಗೆ ಕರ್ನಾಟಕ ಸರ್ಕಾರ ಹೆಚ್ಚುವರಿ ಭೂಮಿ ನೀಡಿಲ್ಲ. ಆದ್ದರಿಂದ ಯೋಜನೆ ವಿಳಂಬವಾಗಿದೆ ಎಂದು ಹೇಳಿದ್ದಾರೆ.

ಸಚಿವರು ತಮ್ಮ ಉತ್ತರದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ನಿಂದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗ್ರೂಪ್‌ಗೆ ನೀಡಲಾಗಿದೆ. ರನ್ ವೇ ವಿಸ್ತರಣೆ ಮಾಡಲು 32.97 ಎಕರೆ ಭೂಮಿ ಅಗತ್ಯವಿದೆ, ಇದನ್ನು ಉಚಿತವಾಗಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸಚಿವಾಲಯ ಮನವಿ ಸಲ್ಲಿಸಿದೆ. ಆದರೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಗೆ ಕ್ರಮ: ಕರ್ನಾಟಕ ಸರ್ಕಾರ ಭೂಮಿ ನೀಡದ ಹೊರತು ರನ್ ವೇ ವಿಸ್ತರಣೆ ಸಾಧ್ಯವಿಲ್ಲ. ಆದ್ದರಿಂದ ರನ್ ವೇ ವಿಸ್ತರಣೆ ಆಗುವ ತನಕ ಪ್ರಯಾಣಿಕರ ಸುರಕ್ಷತೆಗೆ ಅಗತ್ಯ, ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಸೂಚನೆ ನೀಡಿದೆ ಎಂದು ಸಚಿವರು ಹೇಳಿದ್ದಾರೆ.
ಸಂಸದರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ (ಪಿಓಸಿ) ಮಾನ್ಯತೆ ನೀಡುವ ಕುರಿತು ಸಹ ಪ್ರಶ್ನೆ ಮಾಡಿದ್ದರು. ಅಂತರಾಷ್ಟ್ರೀಯ ವಿಮಾನಗಳು ಮಂಗಳೂರು ನಗರಕ್ಕೆ ಬರುವಂತೆ ಆಗಲು ಈ ವ್ಯವಸ್ಥೆ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ಸಹ ಸಚಿವರು ಉತ್ತರ ನೀಡಿದ್ದಾರೆ.
ಸಚಿವರು, ಅಂತರಾಷ್ಟ್ರೀಯ ವಿಮಾನಗಳು ಆಗಮಿಸುವುದು ಆ ದೇಶದ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಡೆಯುತ್ತದೆ. ಈ ಒಪ್ಪಂದದಂತೆ ಭಾರತದ ಯಾವುದೇ ಭಾಗದ ವಿಮಾನ ನಿಲ್ದಾಣಗಳ ಆಗಮನ ಮತ್ತು ನಿರ್ಗಮನಕ್ಕೆ ಅವಕಾಶ ಇರುತ್ತದೆ. ಆದರೆ ನಿರ್ದಿಷ್ಟ ವಿಮಾನ ಸೇವೆ ಪಾಯಿಂಟ್ ಆಫ್ ಕಾಲ್ ಮಾನ್ಯತೆ ಇರುವ ವಿಮಾನ ನಿಲ್ದಾಣಕ್ಕೆ ಸೀಮಿತವಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸದ್ಯ ಮಂಗಳೂರು ಸೇರಿದಂತೆ ಯಾವುದೇ ಮೆಟ್ರೋ ರಹಿತ ನಗರಗಳ ವಿಮಾನ ನಿಲ್ದಾಣಗಳಿಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ನೀಡಲಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಮಂಗಳೂರು ರನ್ ವೇ ವಿಸ್ತರಣೆ ಮಾಡಲು ಅಗತ್ಯವಿರುವ 32.97 ಎಕರೆ ಭೂಮಿಯನ್ನು ಇನ್ನೂ ಏಕೆ ಹಸ್ತಾಂತರ ಮಾಡಿಲ್ಲ ಎಂದು ಸರ್ಕಾರದ ಪರವಾಗಿ ಯಾರೂ ಸಹ ಹೇಳಿಕೆಯನ್ನು ನೀಡಿಲ್ಲ. ಭೂಮಿ ಹಸ್ತಾಂತರವಾದರೆ ಕಾಮಗಾರಿಗಳು ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications