ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆ; ನೆಲ ಕಚ್ಚಿದ 7 ಮನೆಗಳು
ಮಂಗಳೂರು, ಆಗಸ್ಟ್ 9: ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ನೇತ್ರಾವತಿ, ಕುಮಾರಧಾರಾ, ಸ್ವರ್ಣಾ, ಸೀತಾ ಸಹಿತ ಪ್ರಮುಖ ನದಿಗಳು ಉಕ್ಕಿ, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸ್ನಾನಘಟ್ಟ ಮುಳುಗಿದ್ದು, ನದಿಯ ನೀರಿನಿಂದ ಅಂಗಡಿಗಳು ಮುಳುಗಿವೆ. ಉಪನದಿ ದರ್ಪಣತೀರ್ಥ ಉಕ್ಕೇರಿದ್ದು, ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ಕುಲ್ಕುಂದ, ನೂಚಿಲ ಪ್ರದೇಶಗಳಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದೆ.
ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಬಂಟ್ವಾಳ- ಪಾಣೆಮಂಗಳೂರು ಭಾಗದಲ್ಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇಲ್ಲಿಯ 10ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಗಾಳಿಗೆ ಮರ ಬಿದ್ದು, ಹಲವು ಮನೆಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ತಲಾ 13 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಎನ್‌ಡಿಆರ್ ಎಫ್ ನಿಯೋಜಿಸಲಾಗಿದೆ. ಸುಳ್ಯದ ಕಂದಡ್ಕ, ಮಿತ್ತೂರು, ಪಂಜ, ಅರಂಬೂರು, ಪೆರೋಡಿ, ಕಡಬದ ಉಚ್ಚಿಲ, ಕುಲ್ಕುಂದ ಮತ್ತು ಅಲಂಕಾರ್ ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಕ್ಕಾವು ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮವಾಗಿ ಸೋಮಂತಡ್ಕ- ಕಾಜೂರು ಸಂಪರ್ಕ ರಸ್ತೆ ಕಡಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 7 ಮನೆಗಳು ಕುಸಿದಿದೆ. ಬೆಳ್ತಂಗಡಿ ತಾಲೂಕಿನ ಕಾಜೂರು- ಕೊಲ್ಲಿ, ಮಲವಂತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪಾಯದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಿದ್ದಾರೆ.












Click it and Unblock the Notifications