ಮಂಗಳೂರು : ಪಡೀಲ್ ರಸ್ತೆಯಲ್ಲಿ ಸವಾರರ ಪರದಾಟ
ಮಂಗಳೂರು, ಸೆಪ್ಟೆಂಬರ್ 25 : ಕಾಲೇಜಿಗೆ ಸರಿಯಾದ ಸಮಯಕ್ಕೆ ಹೋಗೋ ಹಾಗಿಲ್ಲ, ಆಂಬ್ಯುಲೆನ್ಸ್ ಬಂದ್ರೆ ದಾರಿ ಇಲ್ಲ, ಸದಾ ಸಂಚಾರ ಅಸ್ತವ್ಯಸ್ತ. ಇದು ಮಂಗಳೂರಿನ ಕಣ್ಣೂರು ಪಡೀಲ್‌ನಲ್ಲಿನ ರಸ್ತೆಯ ಪರಿಸ್ಥಿತಿ. ಇದು ಕೆಲವು ದಿನಗಳ ಸಮಸ್ಯೆಯಲ್ಲ ಸುಮಾರು ಮೂರು ತಿಂಗಳಿನಿಂದ ಈ ಸಮಸ್ಯೆ ವಾಹನ ಸವಾರರನ್ನು ಕಾಡುತ್ತಿದೆ.
ಬೆಂಗಳೂರು, ಮೈಸೂರು, ಬಂಟ್ವಾಳ, ಪುತ್ತೂರು ಮುಂತಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಣ್ಣೂರು ಪಡೀಲ್ ನಡುವೆ ಹಾದುಹೋಗುತ್ತದೆ. ಆದರೆ, ಈ ರಸ್ತೆಯಲ್ಲಿ ಸದಾ ಟ್ರಾಫಿಕ್ ಜಾಮ್. ರಸ್ತೆಯೂ ಹದಗೆಟ್ಟಿದ್ದು, ಸಂಚಾರ ದಟ್ಟಣೆ ಉಂಟಾಗಲು ಪರೋಕ್ಷವಾಗಿ ಕಾರಣವಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬರುವವರು ರಿಪೇರಿಯಾಗಿರುವ ಶಿರಾಡಿ ಘಾಟ್ ರಸ್ತೆ ನೋಡಿ ಸಂತಸದಿಂದ ಬಂದರೆ ಕಣ್ಣೂರು ಬಳಿ ಟ್ರಾಫಿಕ್ ಜಾಮ್ ಅವರನ್ನು ಸ್ವಾಗತಿಸಲಿದೆ. ಸುಮಾರು ಮೂರು ತಿಂಗಳಿನಿಂದ ಈ ರಸ್ತೆ ಹೀಗೆ ಇದ್ದರೂ ಯಾವ ಅಧಿಕಾರಿಗಳು ಇತ್ತ ಮುಖಮಾಡಿಲ್ಲ. [ಮಂಗಳೂರು ರೈಲ್ವೆ ಸಿಬ್ಬಂದಿಗಳ ಗೋಳು ಕೇಳುವವರಾರು?]
ಕಣ್ಣೂರು ರೇಲ್ವೆ ಬ್ರಿಡ್ಜ್ ಕೆಳಗೆ ಇರುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಇದರ ಪರಿಣಾಮ ಅಡ್ಯಾರ್‌ನಿಂದ ಪಡೀಲ್ ತನಕ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇಲ್ಲಿ ಸಿಕ್ಕಿಹಾಕಿಕೊಳ್ಳುವ ವಾಹನ ಸವಾರರು ಸರಿಯಾದ ಸಮಯಕ್ಕೆ ನಗರಕ್ಕೆ ತಲುಪಲಾಗದೇ ಪರದಾಡುತ್ತಾರೆ.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ಆಯ್ಕೆಯಾಗಿದೆ. ಆದರೆ, ಈ ರಸ್ತೆ ಎಂದು ಸ್ಮಾರ್ಟ್ ಆಗಲಿದೆ? ಎಂಬುದಕ್ಕೆ ಮಾತ್ರ ಉತ್ತರವಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳೋಣ ಎಂದು ಕರೆ ಮಾಡಿದರೆ, ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ.
ಹಲವು ತಿಂಗಳಿನಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಯಾವ ಅಧಿಕಾರಿಗಳು ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿತ್ಯದ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications