ಮಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿದ ಜೆಡಿಎಸ್-ಕೈ ಕಾರ್ಯಕರ್ತರು
ಮಂಗಳೂರು, ಮೇ. 19: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಲಿರುವ ಹಿನ್ನಲೆಯಲ್ಲಿ ಹಾಗೂ ಬಿಜೆಪಿ ಸರ್ಕಾರ ವಿಶ್ವಾಸ ಮತವಿಲ್ಲದೆ ಅಧಿಕಾರ ಕಳೆದುಕೊಂಡಿದ್ದಕ್ಕೆ ಮಂಗಳೂರಿನಲ್ಲಿ ಶನಿವಾರ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ನಗರದ ಬೈಂದೂರ್ ನಲ್ಲಿರುವ ಜೆಡಿಎಸ್ ಕಚೇರಿ ಬಳಿ ವಿಜಯೋತ್ಸವ ಆಚರಿಸಿದ ಜೆಡಿಎಸ್ ಕಾರ್ಯಕರ್ತರು, ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು. ಎಚ್ ಡಿ ಕುಮಾರಸ್ವಾಮಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿರುವ ಹಿನ್ನೆಲೆಯಲ್ಲಿ ಜಯಘೋಷ ಹಾಕಿದರು.
ಮಾಜಿ ಶಾಸಕ ಜೆ ಆರ್ ಲೋಬೊ ನೇತೃತ್ವದಲ್ಲಿ ಸಂಭ್ರಮಾಚರಣೆ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಪಟಾಕಿ ಸಿಡಿಸಿ, ವಾಹನಗಳನ್ನು ನಿಲ್ಲಿಸಿ ಸಿಹಿ ವಿತರಿಸಿದರು.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಂಭ್ರಮಾಚರಣೆ ನಿಷೇಧಿಸಿ ಸೆಕ್ಷನ್ 144 ಜಾರಿಯಲ್ಲಿದ್ದರೂ ರಸ್ತೆಗಿಳಿದು ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು
ಸಂಭ್ರಮಾಚರಣೆ ನಡೆಸಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೂರೇ ದಿನಕ್ಕೆ ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಗೆಲುವಿನ ನಗೆ ಮೂಡಿದೆ.

ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಈಗಾಗಲೇ ಸರ್ಕಾರ ರಚನೆಗೆ ಅವಕಾಶ ಕೋರಿ, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಕೂಟ ಪತ್ರ ಸಲ್ಲಿಸಿದೆ. ಎಚ್ ಡಿ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆ.












Click it and Unblock the Notifications