ಮಂಗಳೂರು : ಕಾಂಗ್ರೆಸ್ ನಾಯಕರ ವಿರುದ್ಧ ಪೂಜಾರಿ ಗರಂ
ಮಂಗಳೂರು, ಜ.31 : ಪುತ್ತೂರಿನಲ್ಲಿ ಸ್ಥಾಪನೆಗೊಂಡಿರುವ ಭಾರತೀಯ ಹಿಂದೂ ಪರಿಷತ್ ಬಗ್ಗೆ ಮತ್ತೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ. ಯಾವ ಕಾಂಗ್ರೆಸ್ ಮುಖಂಡರಿಗೂ ಬಿಹೆಚ್‍ಪಿ ಸ್ಥಾಪಕರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯವಿಲ್ಲ ಎಂದು ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಜನಾರ್ದನ ಪೂಜಾರಿ ಅವರು ಭಾರತೀಯ ಹಿಂದೂ ಪರಿಷತ್ ಸ್ಥಾಪಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ರಾಹುಲ್ ಗಾಂಧಿ ಯಾವುದೇ ಸಂದರ್ಭದಲ್ಲಿ ಮತೀಯ ಸಂಘಟನೆಗಳನ್ನು ಕಟ್ಟುವಂತೆ ಕರೆ ನೀಡಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಪುತ್ತೂರಿನ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಯಾವ ನಾಯಕರಿಗೂ ಇಲ್ಲ ಎಂದು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.[ಬಿಎಚ್ ಪಿ ಕಟ್ಟಿದವರು ಪೂಜಾರಿ ಕೆಂಗಣ್ಣಿಗೆ ಗುರಿಯಾದ್ರು!]
ಬಿಎಚ್‌ಪಿ ಸ್ಥಾಪನೆಗೊಂಡ ಬಳಿಕ ಪುತ್ತೂರಿನ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪೂಜಾರಿ ಅವರು, ಬಿಎಚ್‍ಪಿ ಸ್ಥಾಪನೆ ಮಾಡಿರೋದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಇದೊಂದು ಸಂವಿಧಾನವಿರೋಧಿ ಸಂಘಟನೆ. ಇದರಿಂದ ಕಾಂಗ್ರೆಸ್ ಪಕ್ಷದ ಜಾತ್ಯಾತೀತ ತತ್ವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದರು.
ಬಿಎಚ್‌ಪಿ ಸ್ಥಾಪಿಸಿದ ತಪ್ಪಿತಸ್ಥ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಜನಾರ್ದನ ಪೂಜಾರಿ ಅವರು, ಪಕ್ಷದಲ್ಲಿರುವಾಗ ಈ ಸಂಘಟನೆ ಸ್ಥಾಪಿಸುವ ಅಗತ್ಯವಿಲ್ಲ, ಸಂಘಟನೆ ಕಟ್ಟುವವರು ಪಕ್ಷಕ್ಕೆ ರಾಜೀನಾಮೆ ನೀಡಿ ತೆರಳಲಿ ಎಂದಿದ್ದರು.
ಅಂದಹಾಗೆ ಪುತ್ತೂರು ಕಾಂಗ್ರೆಸ್‌ನ ಹಲವು ನಾಯಕರು ಸೇರಿ ಬಿಜೆಪಿಯ ವಿಶ್ವ ಹಿಂದೂ ಪರಿಷತ್ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾರತೀಯ ಹಿಂದೂ ಪರಿಷತ್ (ಬಿಎಚ್‌ಪಿ) ಸ್ಥಾಪಿಸಿದ್ದರು. ಇದು ಜ.15ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತ್ತು.












Click it and Unblock the Notifications