ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್‌ನಲ್ಲಿ ಜಲೀಲ್‌ ಹತ್ಯೆ ಪ್ರಕರಣ; ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ: ಸಿಎಂ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್‌, 25: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಅಂಗಡಿ ನಡೆಸುತ್ತಿದ್ದ ಜಲೀಲ್ ಎಂಬುವವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾರೆ. ಹತ್ಯೆಗೀಡಾದ ಜಲೀಲ್‌ ಶವವನ್ನು ಇಂದು ಅಂತ್ಯ ಸಂಸ್ಕಾರ ಮಾಡಲಾಗಿದೆ. ಮತ್ತೊಂದೆಡೆ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಸುರತ್ಕಲ್ ಪೇಟೆ ಸಂಪೂರ್ಣ ಬಂದ್ ಆಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಪೊಲೀಸರು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ. ಜಿಲ್ಲೆಯ ಜನರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು. ಪೊಲೀಸರು ಈ ಪ್ರಕರಣದಲ್ಲಿ ಸರ್ವಸ್ವತಂತ್ರರು ಆಗಿದ್ದಾರೆ. ತನಿಖೆಯಲ್ಲಿ ನೈಜ ಆರೋಪಿಗಳಿಗೆ ಕಾನೂನಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಸುರತ್ಕಲ್‌ನಲ್ಲಿ ಮುಸ್ಲಿಂ ವ್ಯಾಪಾರಿಯ ಕೊಲೆ: ನಿಷೇಧಾಜ್ಞೆ, ಮದ್ಯ ಮಾರಾಟ ಬಂದ್ಸುರತ್ಕಲ್‌ನಲ್ಲಿ ಮುಸ್ಲಿಂ ವ್ಯಾಪಾರಿಯ ಕೊಲೆ: ನಿಷೇಧಾಜ್ಞೆ, ಮದ್ಯ ಮಾರಾಟ ಬಂದ್

ಪೋಲೀಸರು ಸ್ವತಂತ್ರ್ಯವಾಗಿ ತನಿಖೆ ಮಾಡುತ್ತಾರೆ. ಈ ನಡುವೆ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಊಹಾಪೋಹಗಳಿಗೆ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಜನ ಕಿವಿಗೊಡಬೇಡಿ. ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಹತ್ಯೆಯನ್ನು ನೋಡಿರುವ ಪ್ರತ್ಯಕ್ಷದರ್ಶಿಗಳಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನಿನಡಿ ಶಿಕ್ಷಿಸಲಾಗುವುದು. ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯನ್ನು ಆ ಅರ್ಥದಲ್ಲಿ ಹೇಳಿಲ್ಲ. ಒಂದು ಪ್ರಕರಣವನ್ನು ವೈಭವೀಕರಣ ಮಾಡಲು ಹೋಗಬೇಡಿ. ಸಮಾಜದಲ್ಲಿ ಗಲಭೆ ಸೃಷ್ಠಿಸುವವರಿಗೆ ಅವಕಾಶ ಕೊಡಬೇಡಿ. ಒಂದು ಪ್ರಕರಣವನ್ನು ಬಿಟ್ಟು ಬೇರೇನೋ ಮಾಡಲು ಹೋಗಬಾರದು. ಅದರಿಂದ ಇಂತಹ ಪ್ರಕರಣಗಳ ನಿಜವಾದ ಕಾರಣ ಮರೆಯಾಗುತ್ತದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆಯನ್ನು ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 ಸುರತ್ಕಲ್‌ನಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌

ಸುರತ್ಕಲ್‌ನಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌

ಸುರತ್ಕಲ್ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಕಳೆದ ಕೆಲ ತಿಂಗಳ ಹಿಂದೆ ನಡೆದ ಫಾಝಿಲ್ ಹತ್ಯೆಯ ನೆನಪು ಮಾಸುವ ಮುನ್ನವೇ ಇದೀಗ ಜಲೀಲ್ ಅವರ ಹತ್ಯೆಯಾಗಿದೆ. ಸುರತ್ಕಲ್‌ನ ಕಾಟಿಪಳ್ಳದ ನಾಲ್ಕನೇ ಬ್ಲಾಕ್‌ನಲ್ಲಿದ್ದ ಜಲೀಲ್ ಅಂಗಡಿಗೆ ಇಬ್ಬರು ಯುವಕರು ಬಂದಿದ್ದು, ಮೊದಲು ಜಲೀಲ್ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತಿನ ಚಕಮಕಿ‌ ನಡೆದು ದುಷ್ಕರ್ಮಿಗಳಿಬ್ಬರು ತಮ್ಮಲ್ಲಿದ್ದ ಚೂರಿಯಿಂದ ಜಲೀಲ್ ದೇಹದ ವಿವಿಧೆಡೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್‌ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

 ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

ಈ ಘಟನೆ ಸುದ್ದಿಯಾಗುತ್ತಿದ್ದಂತೆ ಆಸ್ಪತ್ರೆ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಪೊಲೀಸರು ಹೆಚ್ಚಿನ‌ ಬಂದೋಬಸ್ತ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಇಂದು ಮುಂಜಾನೆ ಮುಂಜಾಗ್ರತಾ ಕ್ರಮವಾಗಿ ಘಟನೆ ನಡೆದ ಆಸುಪಾಸಿನ ಸುರತ್ಕಲ್, ಪಣಂಬೂರು, ಕಾವೂರು, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 27ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಈ ಠಾಣಾ ವ್ಯಾಪ್ತಿಯ ಮದ್ಯ ಮಾರಾಟವನ್ನೂ ಕೂಡ ನಿಷೇಧಿಸಲಾಗಿದೆ. ಜೊತೆಗೆ ಫ್ಯಾಕ್ಟರಿ, ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡದಂತೆ ಕಾರ್ಮಿಕರನ್ನು ಸಂಜೆ 6 ಗಂಟೆಗೆ ಮನೆಗೆ ಕಳಿಹಿಸುವಂತೆ ಮಂಗಳೂರು ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.

 ನೈತಂಗಡಿಯಲ್ಲಿ ಅಂತಿಮ ದರ್ಶನ

ನೈತಂಗಡಿಯಲ್ಲಿ ಅಂತಿಮ ದರ್ಶನ

ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜಲೀಲ್ ಅವರ ಶವ ಪರೀಕ್ಷೆ ನಡೆದಿದ್ದು, ಬಳಿಕ ಕಾಟಿಪಳ್ಳದ ನೈತಂಗಡಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನ ನಡೆಯಿತು. ಬಳಿಕ ಪಂಜಿಮೊಗರುನಲ್ಲಿರುವ‌ ಮಸೀದಿಯಲ್ಲಿ ಶವ ಸಂಸ್ಕಾರವನ್ನು ನಡೆಸಲಾಯಿತು. ಈ ವೇಳೆ ಸುರತ್ಕಲ್ ಸೇರಿದಂತೆ ಜಿಲ್ಲೆಯ ಎಲ್ಲಾ ಕೋಮು‌ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋ‌ಬಸ್ತ್ ಮಾಡಲಾಗಿದೆ. ಆದರೆ ಈ ಹತ್ಯೆ ಹಿಂದೆ ಯಾರಿದ್ದಾರೆ ಅನ್ನವುದು ಇನ್ನೂ ಬೆಳಕಿಗೆ ಬಂದಿಲ್ಲ. ಈ ಸಾವಿನಲ್ಲಿ ಯಾರೂ ರಾಜಕೀಯ ಮಾಡಲು ಮುಸ್ಲಿಂ ಸಮುದಾಯ ಬಿಡುವುದಿಲ್ಲ. ರಾಜಕೀಯಕ್ಕಾಗಿ ಬಡಪಾಯಿಗಳ ಜೀವ‌ ಬಲಿ ತೆಗೆದುಕೊಳ್ಳುಬೇಡಿ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಸಮುದಾಯದಲ್ಲಿ ಯಾರೂ ಗಲಭೆ ನಡೆಸದಂತೆಯೂ ವಿನಂತಿಸಿಕೊಂಡಿದ್ದಾರೆ.

 ಕೃತ್ಯ ತಡೆಯುವಲ್ಲಿ ಸರ್ಕಾರ ವಿಫಲ, ಆರೋಪ

ಕೃತ್ಯ ತಡೆಯುವಲ್ಲಿ ಸರ್ಕಾರ ವಿಫಲ, ಆರೋಪ

ಹತ್ಯೆಗೀಡಾದ ಜಲೀಲ್ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಎಲ್ಲಾ ಜಾತಿ, ಧರ್ಮದವರೊಂದಿಗೂ ಒಡನಾಟದಲ್ಲಿದ್ದರು. ಯಾವುದೇ ಪಕ್ಷ, ಸಂಘಟನೆಯಲ್ಲೂ ಗುರಿತಿಸಿಕೊಳ್ಳದೆ ಸುಮಾರು 15 ವರ್ಷದಿಂದ ವ್ಯವಹಾರ ನಡೆಸುತ್ತಿದ್ದರು. ಕೊಲೆ‌ ಮಾಡಿದ ನಿಜವಾದ ಆರೋಪಿಗಳನ್ನು ಬಂಧಿಸಿ ನ್ಯಾಯ ನೀಡಬೇಕು ಎಂದು ಜಲೀಲ್ ಕುಟುಂಬಸ್ಥರು ಕೇಳಿಕೊಂಡಿದ್ದಾರೆ. ಸುರತ್ಕಲ್ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಮತ್ತೆ ಕೋಮುಗಲಭೆ ಸೃಷ್ಟಿಸಲು ಆಡಳಿತ ಪಕ್ಷಗಳು ಪ್ರಯತ್ನಿಸುತ್ತಿದೆ. ಇದಕ್ಕೆ ಇಲ್ಲಿನ ಜನ ಬೆಂಬಲ ನೀಡುವುದಿಲ್ಲ. ಸ್ವತಃ ಸಿಎಂ ಅವರೇ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಕೃತ್ಯ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಜಕೀಯ ಮುಖಂಡರು ಕಿಡಿಕಾರಿದ್ದಾರೆ.

ಹತ್ಯೆ ನಡೆದ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹತ್ಯೆಯ ಹಿಂದಿರುವ ಶಕ್ತಿ ಹಾಗೂ ಆರೋಪಿಗಳ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಪೊಲೀಸರು ನಾಲ್ಕು ತಂಡಗಳಾಗಿ ತನಿಖೆ ನಡೆಸುತ್ತಿದ್ದು, ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಮತ್ತೆ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

English summary
Jalil murder case in Surathkal: Chief minister Basavaraj bommai said in Mangaluru, Truth will come out in investigation, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X